Veerakesari 12:15
loading...
​(Feb 19, 1630 – Apr 3, 1680)
“ಕಾಶಿಜೀ ಕೀ ಕಳಾ ಜಾತೀ ಮಥುರಾ ಮಸ್ಜಿದ್ ಹೋತಿ| ಯದಿ ಶಿವಾಜಿ ನ ಹೋತಾ ಸುನ್ನತ್ ಹೋತಿ ಸಬ್ ಕೀ||” ಅಂದರೇನು? ಕಾಶಿ ಕಳಾಹೀನವಾಗ್ತಾ ಇತ್ತು, ಮಥುರಾ ಮಸೀದಿಯಾಗಿ ಬದಲಾಗ್ತಾ ಇತ್ತು. ಅಕಸ್ಮಾತ್ ಶಿವಾಜಿ ಹುಟ್ಟದೇ ಇರುತ್ತಿದ್ದರೆ ಇಡೀ ದೇಶ ಇಸ್ಲಾಂ ಸಂಸ್ಕಾರ ಪಡೆಯುತ್ತಿತ್ತು!
ಆ ಮಹಾಪುರುಷನ ಬರುವಿಗಾಗಿ ಅದೆಷ್ಟು ಸಾಧುಸಂತರ ತಪಸ್ಸು ನಡೆದಿತ್ತು. ಮೃತ್ಯುದವಡೆಯಿಂದ ಈ ಮಣ್ಣಿನ ಮಕ್ಕಳನ್ನು ಮುಕ್ತಗೊಳಿಸುವ ಆ ಉದ್ಧಾರಕನ ಬರುವಿಗೋಸ್ಕರ ಅದೆಷ್ಟು ಜನ ಕಾದು ಕುಳಿತಿದ್ದರು. ನಮ್ಮ ರಾಷ್ಟ್ರ, ಧರ್ಮ, ಕಲೆ, ಸಾಹಿತ್ಯ, ಸಂಸ್ಕೃತಿಗಳು ವಿನಾಶದ ಅಂಚನ್ನು ತಲುಪಿದ್ದ ಸಮಯದಲ್ಲಿ ಅವತರಿಸಿ ಅಧರ್ಮವನ್ನಳಿಸಿ ಧರ್ಮರಾಜ್ಯ ಸ್ಥಾಪಿಸಿದ ಯುಗಪುರುಷನಾತ. ನಮ್ಮ ಕಾವ್ಯ ಪುರಾಣಗಳಲ್ಲಿ ವರ್ಣನೆಗೆ ಒಳಪಟ್ಟಿರುವ ಅಭಿಜಾತ ನಾಯಕನ ಸಕಲ ಸದ್ಗುಣಗಳ ಸಾಕಾರ ಮೂರ್ತಿ ಶಿವಾಜಿ..! ಭಾರತದ ಆತ್ಮಚೇತನದ ಮೂರ್ತ ರೂಪ ಅವನು. ಶೌರ್ಯಕ್ಕೆ ಶೌರ್ಯದಿಂದ, ಕ್ರೌರ್ಯಕ್ಕೆ ಕ್ರೌರ್ಯದಿಂದ, ಮೋಸಕ್ಕೆ ಮೋಸದಿಂದ ಉತ್ತರಿಸಿ, ಹಿಂದುಗಳ ಸಹಸ್ರ ವರುಷಗಳ ಭೀತಿಯನ್ನು ಹೋಗಲಾಡಿಸಿದ ಶಿವಾಂಶ ಆತ. ರಾಷ್ಟ್ರವೀರನೊಬ್ಬನಿಗಿರಬೇಕಾದ ಸಕಲ ಲಕ್ಷಣಗಳು ಮೂರ್ತೀಭವಿಸಿದ ಪುರುಷೋತ್ತಮನೇ ಛತ್ರಪತಿ ಶಿವಾಜಿ!
ಶಿವನೇರಿ ದುರ್ಗದಲ್ಲಿ ಶುಕ್ಲನಾಮ ಸಂವತ್ಸರದ ಫಾಲ್ಗುಣ ತದಿಗೆ ಹಿಂದೂಸ್ಥಾನದ ಇತಿಹಾಸದಲ್ಲಿ ಅಮೃತಘಳಿಗೆಯಾಯಿತು. 1627 ಫೆಬ್ರವರಿ ೧೯ ರಲ್ಲಿ ಶಿವಾಜಿಯು ಪುಣೆಯ ಶಿವನೇರಿ ದುರ್ಗ ಎಂಬಲ್ಲಿ ಜನಿಸಿದರು.ತಾಯೆದೆಯ ವಾತ್ಸಲ್ಯರಸದೊಂದಿಗೆ ಧರ್ಮರಸ, ವೀರರಸಗಳನ್ನೂ ಸವಿಯುತ್ತಾ ಬೆಳೆದ ಶಿವಬಾ. ಹಾಲಿನ ಒಂದೊಂದು ಗುಟುಕು, ಅನ್ನದ ಒಂದೊಂದು ತುತ್ತಿನೊಂದಿಗೆ ಸ್ವದೇಶ-ಸ್ವಧರ್ಮನಿಷ್ಠೆಯ ತಿನಿಸನ್ನೂ ಉಣಬಡಿಸಿದ ಮಾತೆ, ರಾಜನೀತಿ-ಯುದ್ಧನೀತಿಗಳನ್ನು ಮಗನಿಗೆ ಅರೆದು ಕುಡಿಸಿದಳು. ಮುಸಲ್ಮಾನರ ಹಾವಳಿಯಿಂದ ಹಾಳು ಬಿದ್ದಿದ್ದ ಪುಣೆಗೆ ಬಂದೊಡನೆ ಮತಾಂಧರ ಅಟ್ಟಹಾಸಕ್ಕೆ ಒಳಗೊಳಗೆ ಕುದಿಯತೊಡಗಿದ ಶಿವಬಾ. “ಹಿಂದೂ ಧರ್ಮ ಪ್ರತಿಷ್ಠಾಯೈ ಸಿದ್ಧಖಡ್ಗ ಸದಾವಯಮ್” ಎಂಬ ಭೀಷಣ ಪ್ರತಿಜ್ಞೆ ಬಾಲ ಶಿವಾಜಿಯ ಬಾಯಿಂದ ಹೊರ ಬಿದ್ದು ಸಹ್ಯಾದ್ರಿಯ ಶಿಖರಗಳಲ್ಲೆಲ್ಲಾ ಅನುರಣಿಸಿತು.
ಇವರ ತಂದೆ ಶಹಾಜಿರಾಜ ಬಿಜಾಪುರದ ಸುಲ್ತಾನನ ಕೈಕೆಳಗಿನ ಒಬ್ಬ ಸರದಾರದ್ದರಿಂದ ತಾಯಿ ಜೀಜಾಬಾಯಿ ಇವನ ಭವಿಷ್ಯ ರೂಪಿಸಿದರು. ಅವಳು ಶಿವಾಜಿಗೆ ಜೀವನ ಮೌಲ್ಯಗಳ ಶಿಕ್ಷಣವನ್ನಿತ್ತಳು.  ಶಿವಾಜಿಯ ಗುರು ದಾದಾಜಿ ಕೊಂಡದೇವ ಶಸ್ತ್ರಾಸ್ತ್ತ್ರ ವಿದ್ಯೆ ಕಲಿಸಿ, ತರುಣ ವೀರನ ಮನಸ್ಸನ್ನು ಜಾಗೃತಗೊಳಿಸಿದರು.
ತಂದೆಗೆ ತನ್ನ ಮಗನ ಸ್ವಭಾವ ಚೆನ್ನಾಗಿ ಗೊತ್ತು. ಶಿವಾಜಿ ಸಿಂಹದಂತೆ  ನಿರ್ಭಯನಾದ ಬಾಲಕ, ಪರದೇಶಿಯರಿಗಂತೂ ಅವನು ಸುತಾರಾಂ ತಲೆಬಾಗುವವನಲ್ಲ ಎಂಬುದನ್ನು ಕಂಡು ಅವನಿಗೆ ತುಂಬ ಸಂತೋಷ.
ಒಂದು ಸಲ ತಂದೆ ಶಹಾಜಿರಾಜ ಶಿವಾಜಿಯನ್ನು ಬಿಜಾಪುರದ ದರ್ಬಾರಿಗೆ ಕರೆದುಕೊಂಡು ಹೋದ. ಆಗಿನ್ನೂ ಶಿವಾಜಿಗೆ ಹನ್ನೆರಡು ವರ್ಷವೂ ತುಂಬಿರಲಿಲ್ಲ. ಬಿಜಾಪುರದ ಮುಸಲ್ಮಾನ ಸುಲ್ತಾನನಿಗೆ ಶಹಾಜಿ ಮೂರು ಸಲ ನೆಲಮುಟ್ಟಿ ನಮಸ್ಕಾರ ಮಾಡಿದ. ಆಮೇಲೆ ಮಗನಿಗೂ ಅದೇ ರೀತಿ ಮಾಡಲು ಹೇಳಿದ. ಆದರೆ…. !
ಶಿವಾಜಿ ಮಾತ್ರ ಎರಡು ಹೆಜ್ಜೆ ಹಿಂದೆ ಸರಿದ. ತಲೆಬಾಗದೆ ನೆಟ್ಟಗೇ ನಿಂತ. ನಮ್ಮ ದೇಶವನ್ನು, ನಮ್ಮ ಧರ್ಮವನ್ನು ತುಳಿದಿರುವ ಪರಕೀಯ ರಾಜನಿಗೆ ನಾನು ತಲೆಬಾಗುವುದಿಲ್ಲ ಎನ್ನುವ ನಿರ್ಧಾರ ಅವನ ಕಣ್ಣಲ್ಲಿ ಮಿಂಚಿತು. ಶಿವಾಜಿ ನಮಸ್ಕಾರ ಮಾಡದೆ ಹಾಗೆಯೇ ಸಿಂಹನಡಿಗೆಯಿಂದ ದರ್ಬಾರಿನಿಂದ ವಾಪಸಾದ. ಬಿಜಾಪುರದ ಆಸ್ಥಾನದಲ್ಲಿ ಅದುವರೆಗೆ ಅಷ್ಟು ನಿರ್ಭಯವಾಗಿ ಯಾರೂ ನಡೆದುಕೊಂಡಿರಲಿಲ್ಲ. ಆ ಬಾಲಕನ ಎದೆಗಾರಿಕೆ ಕಂಡು ಎಲ್ಲರೂ ಬೆಕ್ಕಸಬೆರಗಾದರು. ಶಿವಾಜಿ ದರ್ಬಾರಿನಿಂದ ಮನೆಗೆ ಬರುತ್ತಿರುವಾಗ ದಾರಿಯಲ್ಲಿ ಇನ್ನೊಂದು ಘಟನೆ ನಡೆಯಿತು. ಒಬ್ಬ ಕಟುಕ ಹಸುವನ್ನು ಕೊಲ್ಲಲು ಕತ್ತಿ ಎತ್ತಿದ್ದ. ಆ ದೃಶ್ಯ ಶಿವಾಜಿಯ ಕಣ್ಣಿಗೆ ಬಿದ್ದದ್ದೇ ತಡ, ಅವನು ತನ್ನ ಕಿರುಗತ್ತಿಯನ್ನು ಎಳೆದು ಆ ಕಟುಕನ ಕೈಯನ್ನು ಕತ್ತರಿಸಿ ಚೆಲ್ಲಿದ!
ಶಿವಾಜಿ ತನ್ನ ಹತ್ತನೆ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದಿದ್ದ. ಆಗ ಅವನ ತಂದೆ ಶಹಾಜಿರಾಜನ ಆಸ್ಥಾನದಲ್ಲಿ ಜರುಗುತ್ತಿದ್ದ ಪವಿತ್ರವಾದ ಹಿಂದು ರೀತಿನೀತಿಗಳನ್ನು ಕಂಡು ಶಿವಾಜಿ ಸ್ಫೂರ್ತಿ ಪಡೆದಿದ್ದ. ಕರ್ನಾಟಕದಲ್ಲಿ ಹಿಂದೆ ವೈಭವದಿಂದ ಮೆರೆದಿದ್ದ ವಿಜಯನಗರದ ಸಾಮ್ರಾಜ್ಯ ನೆನಪೂ ಅವನಿಗೆ ಹುಮ್ಮಸ್ಸು ತುಂಬಿತು.
ಅಂದು 1674ರ ಜೂನ್ 6, ಹಿಂದು ಪಂಚಾಂಗದ ಜ್ಯೇಷ್ಠ ಶುದ್ಧ ತ್ರಯೋದಶಿಯ ದಿನ ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಸಮುದ್ರ ಮಟ್ಟದಿಂದ 2700ಅಡಿ ಎತ್ತರದಲ್ಲಿ ಇರುವ ರಾಯಗಢ ಕೋಟೆಯಲ್ಲಿ ಅಂದು ಸಂಭ್ರಮದ ವಾತಾವರಣ .ಸಾವಿರಾರು ವರ್ಷಗಳಿಂದ ಈ ಸುಮುಹೂರ್ತಕ್ಕಾಗಿ ಇಡೀ ಭರತಖಂಡ ಕಾಯುತ್ತಿತ್ತು.ಆಸ್ಥಾನ ಪುರೋಹಿತರಾದ ಪಂಡಿತ್ ಗಾಗ ಭಟ್ ಸಪ್ತ ನದಿಗಳ ಪವಿತ್ರ ನೀರು ತುಂಬಿದ್ದ ಚಿನ್ನದ ಕಲಶದಿಂದ ಮಂತ್ರ ಪುರಸ್ಸರವಾಗಿ ಅಭಿಷೇಕ ಮಾಡಿ ಪಟ್ಟಾಭಿಷೇಕ ನೆರವೇರಿಸಿದರು.
ತನ್ನ ೧೯ನೆಯ ವಯಸ್ಸಿಗೇ ಅವನು ಮೊದಲನೆಯ ಕೋಟೆ ಗೆದ್ದ. ಆ ಕೋಟೆಯ ಹೆಸರು ತೋರಣಗಡ. ತೋರಣ! ಎಂತಹ ಸುಂದರವಾದ ಅರ್ಥಪೂರ್ಣವಾದ ಹೆಸರು! ಸ್ವರಾಜ್ಯಕ್ಕೆ ಕಟ್ಟಿದ ತೋರಣ ಅದು! ಕಾವಿಬಣ್ಣದ ಪವಿತ್ರ ಭಗವಾಧ್ವಜ ಅದರ ಮೇಲೆ ಹಾರಾಡತೊಡಗಿತು.
ಶಿವಾಜಿಯ ಆಡಳಿತದಿ೦ದ ನಿಶ್ಚಿ೦ತೆಯಿ೦ದ ಜೀವನ ಸಾಗಿಸುತ್ತಿದ್ದ ಜನರು,, ಊರುರು ಸುತ್ತಿ ಶಿವಾಜಿಯ ಆಸ್ಥಾನದ ಮು೦ದೆ ದಾನಕ್ಕಾಗಿ ನಿ೦ತ ಸ೦ತ ರಾಮದಾಸರನ್ನು ನೋಡಿದ ಶಿವಾಜಿ ಆಸ್ಥಾನದಿ೦ದ ಕೆಳಗಿಳಿದು ಬ೦ದರು ರಾಮದಾಸರು “ನಿನ್ನ ಆಡಳಿತದಲ್ಲಿ ನಾನು ದಾನವನ್ನು ನಿರಿಕ್ಷಿಸಬಹುದೆ”ಎ೦ದರು ಶಿವಾಜಿ ಮಹಾರಾಜರು ಇವರ ಬರುವಿಕೆಯನ್ನು ತಿಳಿದು ಮೊದಲೇ ಬರೆದಿಟ್ಟಿದ್ದ ಒ೦ದು ಕಾಗದವನ್ನು ರಾಮದಾಸರ ಜೋಳಿಗೆಗೆ ಹಾಕಿದರು,,ಶಿವಾಜಿಯ ನಡುವಳಿಕೆ ಕ೦ಡು ವಿಚಲಿತರಾದ ರಾಮದಾಸರು  ಮ೦ತ್ರಿಯನ್ನು ಕರೆದು ಆ ಕಾಗದ ಜೋರಾಗಿ ಓದಲು ತಿಳಿಸಿದರು 
ಆ ಕಾಗದದಲ್ಲಿ “ನಾನು ಗೆದ್ದ ಕೋಟೆ,, ಧನ ಸ೦ಪತ್ತು ಇದೆಲ್ಲ ನಿಮ್ಮಪಾದಕ್ಕೆ ಅರ್ಪನೆ” ಎ೦ದು ಬರೆದಿತ್ತು ರಾಮದಾಸರು  “ಸರಿ ಇದನ್ನೆಲ್ಲ ನನಗೆಕೊಟ್ಟು ನೀನೇನು ಮಾಡುತ್ತಿಯಾ”ಎ೦ದರು ಶಿವಾಜಿ “ನಾನು ನಿಮ್ಮ ಪಾದಸೇವೆ ಮಾಡಿಕೊಂಡು ನಿಮ್ಮ ಕಾಲ ಕೆಳಗಿರುತ್ತೇನೆ೦ದರು” ರಾಮದಾಸರು ಶಿವಾಜಿಯ ಗುರುನಿಷ್ಟೆ ಪರೀಕ್ಷಿಸಲು “ಸರಿನೀನು ಜೋಳಿಗೆ ಹಾಕು ನನ್ನ ಹಿ೦ಬಾಲಿಸು” ಎ೦ದು ಮು೦ದೆ ಹೊರಟರು ದಿನಾಲೂ ಗುರಿಗಳಿಗಾಗಿ ಭಿಕ್ಷಾಟನೆ ಮಾಡಿ ಗುರುವಿನ ಹಸಿವು ನೀಗಿಸಿ ಕಾಲು ಒತ್ತುತ್ತಾ ದಿನ ಕಳೆಯತೊಡಗಿದ ಶಿವಾಜಿ ರಾಮದಾಸರಿಗೆ ಇವನು ಹೊಗಲಾರದನ್ನು ಕ೦ಡು ಕಳವಳ ಶುರುವಾಯಿತು. ರಾಮದಾಸರು “ಶಿವಾಜಿನೀನು ಇದನ್ನು ಮಾಡಿದ್ದು ಸಾಕು ಇನ್ನೂ ರಾಜ್ಯವಾಳಲು ಹೊರಡು”ಎ೦ದರು ಶಿವಾಜಿ “ಅದಾಗದು ಗುರುಗಳೆ ಅದು ನನ್ನ ರಾಜ್ಯವಲ್ಲ ನಾನು ನಿಮಗೆ ದಾನವಾಗಿ ನೀಡಿದ್ದೇನೆ ಮರಳಿ ಪಡೆದರೆ ಅದು ಅಧರ್ಮವಾಗುತ್ತೆ ಅ೦ತಹ ಕೆಲಸ ನಾನೆ೦ದು ಮಾಡಲಾರೆ”ರಾಮದಾಸರು “ಸಮಜಾಯಿಸಿ ಅದು ನನ್ನದೇ ರಾಜ್ಯ ಅದರ ಸೇವೆಮಾಡಲು ನಿನ್ನನ್ನು ನೇಮಿಸಿದ್ದೇನೆ ನಿನ್ನ ಕರ್ತವ್ಯಕ್ಕೆ ತಯಾರಾಗು”ಎ೦ದರು ಶಿವಾಜಿಯು ರಾಮದಾಸರ ಕಾಲಿಗೆ ನಮಸ್ಕರಿಸಿ ಹೊರಡಲು ಸಿದ್ಧನಾದ..
ರಾಮದಾಸರು  “ನಡೆಯಲಿ ಧರ್ಮ ರಕ್ಷಣೆ” ಎ೦ದು ಆಶಿರ್ವದಿಸಿ ಕಳಿಸಿದರು. ಮರಳಿ ಬ೦ದ ಶಿವಾಜಿ ಗುರು ತೊಟ್ಟಿದ್ದ ಕೇಸರಿ ಕಾವಿ ಬಟ್ಟೆಯನ್ನೆ ತನ್ನ ಸಾಮ್ರಾಜ್ಯದ ಧ್ವಜವನ್ನಾಗಿ ಮಾಡಿ ಗುರು ರಾಮದಾಸರ ಹೆಸರಲ್ಲಿ ಆಡಳಿತ ನಡೆಸಲು ಸಿದ್ಧನಾದ. 1655ರ ವೇಳೆಗೆ ಜಾಲ್ವಿ,,ಪ್ರತಾಪಗಢ,,ಲೊಹಗಢ ಮು೦ತಾದಕೋಟೆಗಳು ಇವರ ವಶವಾಗಿದ್ದವು. ಶಿವಾಜಿ ಮಹಾರಾಜರ ಜೀವನದ ಕಡುವೈರಿ ಮತಾ೦ಧ “ಔರ೦ಗಜೇಬ್”ಮಧ್ಯಭಾರತದ ದೊರೆಯಾಗಿ ಪಟ್ಟವೇರಿದ ಶಿವಾಜಿಯ ಪರಾಕ್ರಮಕ್ಕೆ ಬಿಜಾಪುರ ಮತ್ತು ಮೊಗಲ್ ಸುಲ್ತಾನರು ಬೆಕ್ಕಸ ಬೆರಗಾಗಿದ್ದರು. ಮೊದಲು ಶಿವಾಜಿಯನ್ನು ಸೋಲಿಸಿ ಆಮೇಲೆ ಮು೦ದಿನ ಕೆಲಸ ಎ೦ಬ ನಿರ್ಧಾರಕ್ಕೆ ಬ೦ದ ಔರ೦ಗಜೇಬ್ ಗೆ ಸ್ವತಃ ತಾನೇ ಬ೦ದು ಯುದ್ಧಮಾಡಲು ಅವನಿಗೆ ಮನೆಯ ಕಲಹಗಳಿ೦ದ ಆಗಲಿಲ್ಲ ಕೊನೆಗೆ ಅವನ ಹೆ೦ಡತಿಯ ತಮ್ಮನಾದ ಅಫ್ಘಾನಿಸ್ತಾನದ “ಅಫ್ಜಲ್ ಖಾನ್”ನನ್ನು ನೇಮಿಸಿದ. ಅಪ್ಜಲ್ ಖಾನ್ ನೊಡಲು ವಿಕಾರವಾಗಿ ಅತಿ ಕ್ರೂರಿ ಆಗಿದ್ದ ಹಿ೦ದು ಹೆಣ್ಣು ಮಕ್ಕಳ ಮಾನಹರಣಕ್ಕೆ ಕಾರಣನಾಗಿದ್ದ.
ಅಫಜಲ್ ಖಾನ್ ಸಭೆಯಲ್ಲಿ “ಅವನನ್ನು ನಾನು ಕುದುರೆಯಿ೦ದ ಕೆಳಗೆ ಇಳಿಯದೆ ಸೋಲಿಸಿ ಎಳೆದುಕೊಂಡು ಬರುತ್ತೇನೆ”” ಎ೦ದು ವ್ಯ೦ಗವಾಡಿ ಹೊರಟನು. ಬಲಿಷ್ಠ ಸೈನ್ಯದೊ೦ದಿಗೆ ಹೊರಟ ಅಫ್ಜಲ್ ಖಾನ್ ನ ವಿಷಯ ಅರಿತ ಶಿವಾಜಿ ತನ್ನ ಜನರೊ೦ದಿಗೆ ಸಭೆ ಕರೆದ. ಎಲ್ಲರೂ ಬೇಡ ನಾವು ಸ೦ಧಾನ ಮಾಡಿಕೊಳ್ಳೊದೆ ಒಳಿತು ಎ೦ದು ಹೇಳಿದರು, ಆದರೆ ಶಿವಾಜಿ ಎಲ್ಲರ ಮಾತನ್ನು ಧಿಕ್ಕರಿಸಿ ಯುದ್ಧಕ್ಕೆ ಸನ್ನದನಾದ. ಶಿವಾಜಿ ಯುದ್ಧಕ್ಕೆ ಸಿದ್ಧನಾದ ಸಮಯದಲ್ಲಿ ಅಫ್ಜಲ್ ಖಾನ್ ನಿ೦ದ ಶಾ೦ತಿ ಸ೦ಧಾನದ ಪತ್ರ ಬ೦ತು ಇದರ ಹಿ೦ದೆ ಕುತ೦ತ್ರ ಇರುವುದನ್ನು ಅರಿತ ಶಿವಾಜಿ ಶಾ೦ತಿ ಸ೦ಧಾನಪತ್ರ ತ೦ದಿದ್ದ ಅಪ್ಜಲ ಖಾನ್ ಸೈನಿಕರನ್ನು ಚೆನ್ನಾಗಿ ನೋಡಿಕೊಂಡು ಯುದ್ದಗೆದ್ದ ಮೇಲೆ ನಿಮಗೆ ಕಾಣಿಕೆ ಕೊಡುವುದಾಗಿ ಆಸೆ ತೊರಿಸಿ ಮೋಸದ ವಿವರ ಪಡೆದ. ಕೊನೆಗೆ ಶಿವಾಜಿಯು “ಇದು ಸ೦ಧಾನದ ಸಭೆ ಸೈನಿಕರನ್ನು ಒ೦ದೆಡೆ ಬಿಟ್ಟು ನಾನು ಗೊತ್ತು ಮಾಡಿದ ಸ್ಥಳಕ್ಕೆ ಬಾ” ಎ೦ದು ಅಪ್ಜಲ್ ಖಾನ್ ಗೆ ಕರೆದ ಶಿವಾಜಿ ಹಿ೦ದಿನ ರಾತ್ರಿಯೆ ಪಾಳುಬಿದ್ದ ಗುಡಿಯಲ್ಲಿ ತನ್ನ ಸಹಚರರೊ೦ದಿಗೆ ವಾಸ್ತವ ಹೂಡಿ ಬೆಳಿಗ್ಗೆ ಶುಭ್ರವಾಗಿ ಮೈಗೆ ಉಕ್ಕಿನಕವಚ ಧರಿಸಿ ಕೈಯಲ್ಲಿ ಉಕ್ಕಿನ ವ್ಯಾಘ್ರ (ಕೈ ಬೆರಳಿಗೆ ಹಾಕುವ ಉಕ್ಕಿನಿಂದ ಮಾಡಿದ ಸಾಧನ) ಹಾಕಿ ತನ್ನ ಖಡ್ಗ ತೆಗೆದು ಆರಾಧ್ಯಧೈವ ಅ೦ಭೆಯನ್ನು ನೆನೆಸಿ ಹೊರಟ ಶಿವಾಜಿಗೆ ಎದುರಾಗಿದ್ದು ಮಗನಿಗೆ ಆಶಿರ್ವದಿಸಲು ಬ೦ದ ಜಿಜಾಮಾತೆ “ಹೋಗಿ ಬಾ ಶಿವಾಜಿ ಗೆಲುವು ನಿನ್ನದೆ ಆ ದುರುಳ ದುಷ್ಟ ಅಪ್ಜಲ್ ಖಾನನ ಸಾವನ್ನು ಹಿ೦ದು ಸಮಾಜ ಬಯಸುತ್ತಿದೆ ನಾನು ಬಯಸುತ್ತೇನೆ”ಎ೦ದು ಕಾಲಿಗೆ ಬಿದ್ದ ಮಗನನ್ನು ಆಶೀರ್ವದಿಸಿ ಪ್ರೀತಿಯಿ೦ದ ತಲೆ ಸವರಿಹೊರಟಳು. ಇತ್ತ ಶಿವಾಜಿ ಅಪ್ಜಲ್ ಖಾನ್ ಭೇಟಿ ಸಮಯ ಅಪ್ಜಲ್ ಖಾನ್ ತೊಳು ಅಗಲಿಸಿ ಶಿವಾಜಿಯನ್ನು ತಬ್ಬಿಕೊಳ್ಳಲು ಮು೦ದಾಗಿ ತನ್ನ ತೊಳಲ್ಲಿ ಶಿವಾಜಿಯನ್ನು ಬ೦ದಿಸಿ ಕೊಲ್ಲಲು ಹಿ೦ದಿನಿ೦ದ ಖಡ್ಗ ತೆಗೆಯುವಷ್ಟರಲ್ಲಿ ಶಿವಾಜಿ ತನ್ನ ಕೈಗೆ ಧರಿಸಿದ್ದ ಉಕ್ಕಿನ ಹುಲಿಯುಗಿರಿನ ಸಹಾಯದಿಂದ ಅಪ್ಜಲ್ ಖಾನ್ ನ ಎದೆ ಹರೆದ ಆಮೆಲೆ ಖಡ್ಗದಿಂದ ರು೦ಡ ತೆಗೆದು ತನ್ನ ತಾಯಿಯ ಕಾಲಿನ ಬಳಿ ಇಟ್ಟ.
ಅಫಜಲಖಾನನನ್ನು ಕೊಂದು ಹಾಕಿದ ಮಹಾಶೂರನೆಂದು ಶಿವಾಜಿಯ ಖ್ಯಾತಿ ದೇಶ-ವಿದೇಶಗಳಲ್ಲೆಲ್ಲ ಹಬ್ಬಿತು. ಬಿಜಾಪುರದ ಸುಲ್ತಾನನಿಗಂತೂ ಕಣ್ಣಿಗೆ ಕತ್ತಲು ಕವಿಯಿತು. ಆದರೆ ಶಿವಾಜಿ ಮಾತ್ರ ಗೆಲುವಿನ ಗುಂಗಿನಲ್ಲಿ ಮೈಮರೆಯಲಿಲ್ಲ. ಅದೇ ಉಸಿರಿನಲ್ಲಿ ಬಿಜಾಪುರ ರಾಜ್ಯದ ಎಲ್ಲ ಕಡೆಗಳಲ್ಲೂ ತನ್ನ ದಾಳಿ ಮುಂದುವರೆಸಿ ಅನೇಕ ಕೋಟೆಗಳನ್ನು ಗೆದ್ದುಕೊಂಡ.
ಆಗ ಮತ್ತೊಮ್ಮೆ ಬಿಜಾಪುರದ ಸುಲ್ತಾನ, ಸಿದ್ಧಿಜೌಹರ್ ಎನ್ನುವ ತನ್ನ ಒಬ್ಬ ದೊಡ್ಡ ಸೇನಾಪತಿಯನ್ನು ಆರಿಸಿ ಶಿವಾಜಿಯ ಮೇಲೆ ಕಳಿಸಿಕೊಟ್ಟ, ೭೦ ಸಾವಿರ ಸೈನ್ಯದೊಂದಿಗೆ. ಪನ್ನಾಳಗಡದಲ್ಲಿದ್ದ ಶಿವಾಜಿಯನ್ನು ಹಿಡಿಯಲು, ಜೌಹರನನ್ನು ಬಲವಾದ ಮುತ್ತಿಗೆ ಹಾಕಿದ. ಇಂಗ್ಲೀಷರೂ ಅವನ ಸಹಾಯಕ್ಕೆಂದು ಭಾರಿ ತೋಪನ್ನು ತಂದರು. ಬರುಬರುತ್ತಾ ಮುತ್ತಿಗೆ ಬಹು ಬಿಗಿಯಾಯಿತು. ಮಳೆಗಾಲ ಬಂದರೆ ಮುತ್ತಿಗೆ ಸಡಿಲವಾಗುವುದೆಂದು ಶಿವಾಜಿ ಎಣಿಸಿದ್ದ. ಆದರೆ ಅದು ಸುಳ್ಳಾಯಿತು.
ನಮ್ಮ ಪೇಜ್ ಲೈಕ್ ಮಾಡಿ
ಮುತ್ತಿಗೆಯನ್ನು ಹೊರಗಿನಿಂದ ಭೇದಿಸಲು ಶಿವಾಜಿಯ ಮಹಾದಂಡನಾಯಕ ನೇತಾಜಿ ಪಾಲ್ಕರನೂ ಒಂದು ಕೈ ನೋಡಿದ. ಆದರೆ ಆ ಪ್ರಯತ್ನವು ವಿಫಲವಾಯಿತು. ಇದೇ ಸಮಯಕ್ಕೆ ಬಿಜಾಪುರದ ವಿನಂತಿ ಮೇರೆಗೆ ದಿಲ್ಲಿ ಬಾದಶಹ ಔರಂಗಜೇಬನೂ ತನ್ನ ಸೋದರ ಮಾವ ಶಾಯಿಸ್ತೆ ಖಾನನನ್ನು ೧ ಲಕ್ಷ ಸೇನೆಯೊಂದಿಗೆ ಶಿವಾಜಿಯ ಮೇಲೆ ಬಿಳಲು ಆಜ್ಞಾಪಿಸಿದ. ಎರಡೂ ಕಡೆಯಿಂದ ಮೃತ್ಯುಪಾಶ ಬಿಗಿಯುತ್ತಿತ್ತು. ಅದರಿಂದ ಇನ್ನು ಶಿವಾಜಿ ಆಗಲಿ, ಸ್ವರಾಜ್ಯವಾಗಲಿ ಉಳಿಯಲು ಸಾಧ್ಯವೇ ಇಲ್ಲ ಎಂದು ಎಲ್ಲರೂ ಭಾವಿಸಿದರು.
ಅಂತಹ ಅಪಾಯದ ದಿನಗಳಲ್ಲೂ ಶಿವಾಜಿಯ ಬದಲಿಗೆ ಜೀಜಾಬಾಯಿಯೇ ರಾಜಧಾನಿಯಲ್ಲಿ ಕುಳಿತು ಸ್ವರಾಜ್ಯದ ಎಲ್ಲ ಕಾರುಬಾರುಗಳನ್ನು ಬಿಗಿಯಾಗಿ ನಡೆಸುತ್ತಿದ್ದಳು. ಇತ್ತ ಶಿವಾಜಿ ಕೊನೆಗೆ ನಿರ್ಧಾರಕ್ಕೆ ಬಂದ. ಮುತ್ತಿಗೆಯಿಂದ ಪಾರಾಗಿ ಹೋಗಬೇಕೆಂದು ! ಹೇಗೆ? ಜೌಹರನ ಸರ್ಪಕಾವಲು ಇದೆಯಲ್ಲ? ಚಿಂತೆ ಇಲ್ಲ ! ತಪ್ಪಿಸಿಕೊಂಡು ಹೋಗಲು ಇದ್ದುದರಲ್ಲಿ ಕಡಿಮೆ ಅಪಾಯದ ಹಾದಿಯನ್ನು ಶಿವಾಜಿ ಹುಡುಕಿ ತೆಗೆದ. ಜೊತೆಗೇ ರಾಯಭಾರಿಯ ಕೈಯಲ್ಲಿ ಸಿದ್ಧಿಜೌಹರಿನಿಗೆ ಶರಣಾಗತಿಯ ಪತ್ರ! ತಾನು ಮರುದಿನ ಬೆಳಿಗ್ಗೆ ಯಾವ ಷರತ್ತೂ ಇಲ್ಲದೆ ಶರಣಾಗತನಾಗುವುದಾಗಿಯೂ ತನಗೆ ಕ್ಷಮೆ ತೋರಬೇಕಾಗಿಯೂ ಕಳಕಳಿಯ ವಿನಂತಿ! ಆ ಕಾಗದದ ಸುದ್ದಿ ಜೌಹರನ ಸೈನ್ಯದಲ್ಲಿ ಹಬ್ಬಿದ್ದೇ ತಡ ಅಂದು ರಾತ್ರಿ ಎಲ್ಲರೂ ಆನಂದದಿಂದ ಮೈಮರೆತರು. ಶಿವಾಜಿಯ ಕಾಗದಗಳೆಂದರೆ ವೈರಿಗಳನ್ನು ಮರುಳುಗೊಳಿಸುವ ಸಮ್ಮೋಹನಾಸ್ತ್ರಗಳೇ! ಅಂದು ಮಳೆ, ಗುಡುಗು, ಮಿಂಚುಗಳ ರಾತ್ರಿ. ಆ ಹೊತ್ತಿನಲ್ಲಿ ಶಿವಾಜಿ, ಜೊತೆಗೆ ೮೦೦ ಸೈನಿಕರು, ಗಢದ ಮೇಲಿಂದ ಭೂತಗಳಂತೆ ಸದ್ದಿಲ್ಲದೆ ಕೆಳಗಿಳಿದು ವಿಶಾಲಗಢದ ಕಡೆಗೆ ಹೊರಟರು. ಮುತ್ತಿಗೆಯ ಕಾವಲುಗಾರರು ಅಲ್ಲಲ್ಲಿ ಡೇರೆಗಳಲ್ಲಿ ಇದ್ದರು. ಆದರೆ ಶಿವಾಜಿಯ ಶರಣಾಗತಿಯ ಗುಂಗಿನಲ್ಲಿ! ಅವರಿಗೆ ಸ್ವಲ್ಪ ಸುಳಿವು ಹತ್ತಿದರೂ ಸರ್ವನಾಶವೇ! ಹೆಜ್ಜೆಹೆಜ್ಜೆಗೂ ಎಲ್ಲರಿಗೂ ಕಾತರ. ಆದರೆ ಭವಾನಿ ಕೃಪೆ. ಕೊನೆಗೆ ಆ ಟೋಳಿ ಶತ್ರುಕಣ್ಣುಗಳಿಂದ ಪಾರಾಗಿ ಹೊರಟಿತು. ಶಿವಾಜಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಆ ಮಾವಳಿ ವೀರರು ಒಂದೇ ಸಮನೆ ಓಡತೊಡಗಿದರು. ಅಷ್ಟರಲ್ಲಿ ಮಿಂಚು ಸುಳಿಯಿತು. ವೈರಿಯ ಗೂಢಚಾರನೊಬ್ಬ ಅವರನ್ನು ನೋಡಿದ. ಕೂಡಲೇ ಅವನು ಓಡಿಹೋಗಿ ಸಿದ್ದಿ ಜೌಹರನಿಗೆ ಸುದ್ದಿ ಮುಟ್ಟಿಸಿದ. ಅವನಿಗಂತೂ ಆಕಾಶವೇ ತಲೆಮೇಲೆ ಕಳಚಿಬಿದ್ದಂತೆ ಆಯಿತು. ಆದರೂ ಅವನು ಎದೆಗುಂದದೆ ಕೂಡಲೇ ತನ್ನ ಅಳಿಯ ಸಿದ್ಧ ಮಸೂದನನ್ನು ಕರೆದ. ಅವನ ಕೈಯಲ್ಲಿ ಕುದುರೆ ಸೈನ್ಯ ಕೊಟ್ಟು ಶಿವಾಜಿಯನ್ನು ಬೆನ್ನಟ್ಟಲು ಕಳುಹಿಸಿದ. ಇತ್ತ ಶಿವಾಜಿಗೂ ಇನ್ನು ಪಾರಾಗುವುದು ಕಷ್ಟ ಎನಿಸಿತು. ಆಗ ಅವನು ಮಾಡಿದ ಉಪಾಯ ಏನು ಗೊತ್ತೇ? ಒಂದು ಪಲ್ಲಕ್ಕಿಯಲ್ಲಿ ತಾನು ಕುಳಿತು ಬೇರೊಂದು ಅಡ್ಡದಾರಿಯಲ್ಲಿ ಹೊರಟ. ಶಿವಾಜಿಯಂತೆಯೇ ಗಡ್ಡ ಮೀಸೆ ಇದ್ದ ಇನ್ನೊಬ್ಬನಿಗೆ ವೇಷ ಹಾಕಿ ಮುಂಚಿನ ದಾರಿಯಲ್ಲೇ ಪಲ್ಲಕ್ಕಿಯಲ್ಲಿ ಕೂಡಿಸಿ ಕಳಿಸಿಕೊಟ್ಟ. ಸಿದ್ದಮಸೂದ ಧಾವಿಸಿ ಬಂದವನೇ ಆ ನಕಲಿ ಶಿವಾಜಿಯನ್ನು ಹಿಡಿದುಕೊಂಡು ಹೊರಟ! ಶಿವಾಜಿ  ಸಿಕ್ಕಿದನೆಂದು ಕೇಳಿ ಸಿದ್ಧಿ ಜೌಹರನಿಗೆ ಆದ ಆನಂದ ಅಷ್ಟಿಷ್ಟಲ್ಲ. ಆದರೆ …….! ಪ್ರತ್ಯಕ್ಷ ಕೈಗೆ ಸಿಕ್ಕ ಆ “ಶಿವಾಜಿ” ಯನ್ನು ನೋಡಿ ಮಾತನಾಡಿಸಿದ ಮೇಲೆ ಗೊತ್ತಾಯಿತು. ಅವನು ಪನ್ನಾಳಗಡದ “ಶಿವಾಜಿ” ಎಂಬ ಹೆಸರಿನ ಒಬ್ಬ ಕ್ಷೌರಿಕ ಎಂದು! ಎಲ್ಲರಿಗೂ ಮುಖಕ್ಕೆ ಮಂಗಳಾರತಿ ಎತ್ತಿದಂತಾಯಿತು.
ಸರಿ, ಮತ್ತೆ ಸಿದ್ಧಿಮಸೂದ ಹೊರಟ. ಅಷ್ಟು ಹೊತ್ತಿಗೆ ಮೂವತ್ತು ಮೈಲಿ ಕಳೆದು ಶಿವಾಜಿ ಮತ್ತು ಸಂಗಡಿಗರು ಗಾಜಾಪುರ ಎನ್ನುವ ಕಣಿವೆ ಬಳಿ ಬಂದಿದ್ದರು. ಅಲ್ಲಿಯ ವಿಶಾಲಗಡಕ್ಕೆ ೧೫ ಮೈಲಿ. ಅದೇ ವೇಳೆಗೆ ಸಿದ್ಧಿಮಸೂದನ ಐದು ಸಾವಿರ ರಾವುತರೂ ಅಲ್ಲಿಗೆ ಧಾವಿಸಿದರು. ಶಿವಾಜಿಯ  ಜೊತೆಯಲ್ಲಿ ಒಬ್ಬ ಭೀಮನಂತೆ ಪರಾಕ್ರಮಶಾಲಿಯಾದ ಸರದಾರ ಇದ್ದ. ಅವನ ಹೆಸರು ಬಾಜಿಪ್ರಭು ದೇಶಪಾಂಡೆ. ಅವನು ತನ್ನ ಬಳಿಯ ಅರ್ಧಪಾಲು ಸೈನಿಕರನ್ನು ಶಿವಾಜಿಯ ಜೊತೆಗೆ ಕೊಟ್ಟು ಕೂಡಲೇ ವಿಶಾಲಗಡಕ್ಕೆ ಹೋಗುವಂತೆ ಒತ್ತಾಯಿಸಿದ. ಉಳಿದ ಅರ್ಧ ತುಕಡಿಯೊಂದಿಗೆ ಸಿದ್ದಿ ಮಸೂದನನ್ನು ತಡೆಯಲು ತಾನು ಸ್ವತಃ ನಿಂತ. ಎರಡು ಕೈಗಳಲ್ಲೂ ಕತ್ತಿಯನ್ನು ಮಿಂಚಿನಂತೆ ತಿರುಗಿಸುತ್ತಾ ಬಾಜಿಪ್ರಭು ಹೋರಾಟಕ್ಕೆ ನಿಂತನೆಂದರೆ ಸಾಕ್ಷಾತ್‌ಕಾಲಭೈರವನೇ! ಆ ಇಕ್ಕಟ್ಟಾದ ಕಣಿವೆಯಲ್ಲಿ ಅಲೆಯಲೆಯಾಗಿ ಮೇಲೇರಿ ಬರುತ್ತಿದ್ದ ಪಠಾಣ ಸೈನಿಕರನ್ನು ಅವನು ಲೀಲಜಾಲವಾಗಿ ಕತ್ತರಿಸಿ ಚೆಲ್ಲತೊಡಗಿದ. ಅವನ ಮೈಗೆಲ್ಲ ಗಾಯಗಳಾಗಿ ರಕ್ತ ಸುರಿಯತೊಡಗಿತು. ಆದರೂ ಸಂಜೆಯವರೆಗೆ ಒಂದೇ ಸಮನೆ ಅವನು ಕೆಚ್ಚಿನಿಂದ ಕಾದುತ್ತಲೇ ಹೋದ. ಅವನ ಸಂಗಡಿಗರೂ ಕೆಚ್ಚಿನಿಂದ ಕಾದಿದರು. ಕೆಲವರು ಪ್ರಾಣವನ್ನೂ ತೆತ್ತರು. ಕೊನೆಗೆ ಒಮ್ಮೆ ಬಾಜಿ ಪ್ರಭುವಿನ ಕೊರಳಿಗೆ ವೈರಿಯ ಕತ್ತಿ ಏಟು ಬಿತ್ತು. ಅವನು ನೆಲಕ್ಕೆ ಬಿದ್ದ. ಅದೇ ಸಮಯಕ್ಕೆ ಶಿವಾಜಿಯು ವಿಶಾಲಗಡಕ್ಕೆ ವೈರಿಗಳು ಹಾಕಿದ್ದ ಮುತ್ತಿಗೆಯನ್ನು ಭೇದಿಸಿ ಗಡದ ಮೇಲೆ ಹೋಗಿ ತೋಪು ಹಾರಿಸಿದ. ಆ ಸದ್ದು ಕೇಳಿ ಸಾಯುತ್ತ ಬಿದ್ದಿದ್ದ ಬಾಜಿ ಪ್ರಭುವಿನ ಕಿವಿಯಲ್ಲಿ ಅಮೃತ ಸುರುವಿದಂತಾಯಿತು. ತನ್ನ ಪ್ರಾಣ ತೆತ್ತು ತನ್ನ ಸ್ವಾಮಿ ಶಿವಾಜಿಯ ಪ್ರಾಣ ಉಳಿಸಿದೆನೆಂಬ ಹೆಮ್ಮೆಯಿಂದ ಆ ಸ್ವರಾಜ್ಯದ ವೀರ ಕಣ್ಮುಚ್ಚಿದ. ಅಂತಹ ವೀರನ ರಕ್ತ ಬಿದ್ದ ಆ ಕಣಿವೆಯು ಪವಿತ್ರವಾಯಿತು. ಅಲ್ಲಿಂದಾಚೆಗೆ ಅದರ ಹೆಸರೇ “ಪಾವನಖಂಡಿ” ಎಂದಾಯಿತು. ಇಂತಹ ಪ್ರಾಣಪ್ರಿಯ ಸಂಗಡಿಗರ ಪೈಕಿ ಒಬ್ಬೊಬ್ಬರನ್ನು ಕಳೆದುಕೊಂಡಾಗಲೂ ಶಿವಾಜಿಗೆ ಆಗುತ್ತಿದ್ದ ಮನಸ್ಸಿನ ಸಂಕಟವನ್ನು ವರ್ಣಿಸಲು ಹೇಗೆ ಸಾಧ್ಯ?
ಶಿವಾಜಿ ಪನ್ನಾಳಗಡದಿಂದ ತಪ್ಪಿಸಿಕೊಂಡು ತನ್ನ ರಾಜಧಾನಿ ಸೇರಿದ ಎನ್ನುವ ಸುದ್ದಿ ಬಿಜಾಪುರದ ಸುಲ್ತಾನನಿಗೆ ಮುಟ್ಟಿತು. ಅವನಿಗೆ ಸಾವಿರ ಸಿಡಿಲು ಹೊಡೆದಂತಾಯಿತು. ಶಿವಾಜಿಯ ಮೇಲೆ ಕೂಡಲೇ ಮತ್ತೆ ಕೈ ಎತ್ತುವ ಸಾಹಸ ಅವನಿಗೆ ಆಗಲಿಲ್ಲ. ಇತ್ತ ಶಿವಾಜಿಗೆ ಮಾತ್ರ ಆಗಲೇ ಮುಂದಿನ ಕೆಲಸ ಕಾದಿತ್ತು. ಶಾಯಿಸ್ತೇಖಾನನ ಕಾಟವನ್ನು ಕಳೆಯುವುದು. ಅದಕ್ಕಾಗಿ ಮುಸಲ್ಮಾನರಿಗೆ ಪವಿತ್ರವಾದ ರಮಜಾನ್‌ ತಿಂಗಳನ್ನೇ ಶಿವಾಜಿ ಆರಿಸಿಕೊಂಡ. ದಿನವಿಡೀ ಉಪವಾಸ ಮಾಡಿ ರಾತ್ರಿ ಗಡದ್ದಾಗಿ ಊಟ ಹೊಡೆದು ಅವರೆಲ್ಲ ನಿದ್ರೆ ಮಾಡುತ್ತಿದ್ದಂತಹ ಸಮಯ. ಜೊತೆಗೆ ಶಿವಾಜಿ ಆರಿಸಿಕೊಂಡಿದ್ದು ಔರಂಗಜೇಬನು ಪಟ್ಟಕ್ಕೇರಿದ ದಿನ ಬೇರೆ. ಸರಿ, ಅವೊತ್ತು ಹಬ್ಬದ ಸಡಗರ, ಗದ್ದಲ ಕೇಳಬೇಕೆ? ಆ ದಿನ ರಾತ್ರಿ ಶಿವಾಜಿ ರಾಜಗಡದ ಮೇಲಿಂದ ಎರಡು ಸಾವಿರ ಸೈನಿಕರ ಸಹಿತವಾಗಿ ಕೆಳಗಿಳಿದ. ಪುಣೆಗೆ ಒಂದು ಮೈಲಿ ದೂರದಲ್ಲಿ ಬಂದು ನಿಂತ. ಪುಣೆಯಲ್ಲಿ ಶಿವಾಜಿ ಬೆಳೆದ ಲಾಲಮಹಲಿನಲ್ಲೇ ಈಗ ಶಾಹಿಸ್ತೇಖಾನನ ಬಿಡಾರ. ಪುಣೆಯ ಸುತ್ತಮುತ್ತ ಒಂದು ಲಕ್ಷ ಮೊಗಲ್‌ ಸೈನಿಕರು ಪಾಳೆಯ ಬಿಟ್ಟಿದ್ದರು.
ಶಿವಾಜಿಯ ಲಂಗೋಟಿ ಸ್ನೇಹಿತ ಬಾಬಾಜಿ ಎನ್ನುವವನು ಸಣ್ಣ ಟೋಳಿಯೊಂದಿಗೆ ಮುಂದೆ ಹೊರಟ. ಹಿಂದೆ ಶಿವಾಜಿಯ ಟೋಳಿ. ಬಾಬಾಜಿ ಬಾಯಿಗೆ ಬಂದಂತೆ ಗಟ್ಟಿಯಾಗಿ ಹರಟೆ ಕೊಚ್ಚುತ್ತಾ ಸೀದಾ ಊರಿನೊಳಕ್ಕೆ ನಡೆದ. ಅವರನ್ನು ಕಾವಲುಗಾರರು ತಡೆದು ಗದರಿಸಿದರು. ಅದಕ್ಕೆ ಬಾಬಾಜಿ “ನಾವೂ ಖಾನಸಾಹೇಬರ ಕಡೆಯವರೇ, ಕಾವಲು ಕಾಯಲು ಹೊರಗೆ ಹೋಗಿದ್ದೆವು” ಎಂದು ಹೇಳಿ ಒಳಕ್ಕೆ ಹೊರಟೇಬಿಟ್ಟ. ಅದೇ ರೀತಿ ಹಿಂದಿನ ಟೋಳಿಯೂ ಒಳಹೊಕ್ಕಿತು! ಮೊಗಲ ಕಾರುಬರು ಎಂದರೆ ಕೇಳಬೇಕೇ, ಮದುವೆ ಗೊಂದಲವೇ ಎಷ್ಟೋ ಮೇಲು! ಶಿವಾಜಿ ಸೀದಾ ಲಾಲಮಹಿನ ಹಿತ್ತಿಲ ಬಾಗಿಲ ಬಳಿ ಹೋದ. ಅಲ್ಲಿಂದ ಅಡುಗೆಮನೆಗೆ ನುಗ್ಗಿ, ಅಲ್ಲಿದ್ದವರನ್ನು ಕತ್ತರಿಸಿ ಹಾಕಿ ಶಾಯಿಸ್ತೇಖಾನನ ಮಲಗುವ ಕೋನೆ ಕಡೆಗೆ ಹೊರಟ. ದಾರಿಯಲ್ಲಿ ಅಡ್ಡವಾಗಿದ್ದ ಸಣ್ಣ ಗೋಡೆಯನ್ನು ಕೆಡವಿದ್ದೂ ಆಯಿತು. ಗೋಡೆ ಬಿದ್ದು ಸದ್ದು ಕೇಳಿ ಗಾಬರಿಯಾಗಿ ಒಬ್ಬ ಸೇವಕ ಶಾಹಿಸ್ತೇಖಾನನ ಬಳಿಗೆ ಓಡಿಹೋಗಿ ಕೂಗಿಕೊಂಡ. ಆದರೆ ನಿದ್ರೆಯ ಅಮಲಿನಲ್ಲಿದ್ದ ಖಾನ ” ಅಡಿಗೆ ಮನೆಯಲ್ಲಿ ಏನೋ ಇಲಿ ಸದ್ದು ಇರಬೇಕು, ಹೋಗು” ಎಂದು ಗದರಿಸಿ ಕಳಿಸಿದ. 
ಶಿವಾಜಿ ಮತ್ತು ಸಂಗಡಿಗರು ಒಳಕ್ಕೆ ನುಗ್ಗಿದರು. ಅಷ್ಟು ಹೊತ್ತಿಗೆ ಇಡೀ ಲಾಲಮಹಲ ತುಂಬ “ವೈರಿ ಬಂದ” “ವೈರಿ ಬಂದ” ಎನ್ನುವ ಅಬ್ಬರ ಎದ್ದಿತು. ಶಾಯಿಸ್ತೇಖಾನನನ್ನು ಅವನ ಹೆಂಡತಿಯರು ಪರದೆಯ ಹಿಂದೆ ಅಡಗಿಸಿಟ್ಟರು. ದೀಪ ಆರಿಸಿದರು. ಶಿವಾಜಿ ಅಲ್ಲಿಗೂ ನುಗ್ಗಿ ಆ ಕತ್ತಲಲ್ಲೆ ಕತ್ತಿ ಬೀಸಿದ. ಶಾಹಿಸ್ತೆಖಾನನ ಮೂರು ಬೆರಳು ಶಿವಾಜಿಯ ಒಂದೊಂದು ಅಕ್ಷರಕ್ಕೆ ಒಂದೊಂದರಂತೆ! ತುಂಡಾಯಿತು. ಕೂಡಲೇ ಖಾನನು ಕಿಟಕಿಯಿಂದ ಕೆಳಕ್ಕೆ ಹಾರಿಕೊಂಡ. ಅಷ್ಟೊತ್ತಿಗೆ ಹೊರಗಿನಿಂದ ಮೊಗಲ ಸೈನಿಕರು ಲಾಲಮಹಲನ್ನು ಮುತ್ತಿದರು. ಆ ಕತ್ತಲು, ಗದ್ದಲಗಳಲ್ಲಿ ಶಿವಾಜಿಯ ಸೈನಿಕರೇ ಜೋರಾಗಿ “ವೈರಿಯನ್ನು ಹಿಡಿಯಿರಿ, ಕತ್ತರಿಸಿ” ಎಂದು ಅಬ್ಬರಿಸುತ್ತಾ ಲಾಲಮಹಲಿನ ಬಾಗಿಲನ್ನು ತಾವೇ ತೆರೆದು ಹೊರಬಿದ್ದರು ಮತ್ತು ಮೊಗಲ ಪಾಳಯದಿಂದ ಪಾರಾಗಿ ಅಲ್ಲಿ ತಮಗಾಗಿ ಕಾಯುತ್ತಿದ್ದ ಕುದುರೆಗಳನ್ನು ಹತ್ತಿ ಸಿಂಹಗಡಕ್ಕೆ ಪರಾರಿಯಾದರು!
 ಜೌರಂಗಜೇಬನಿಗಂತೂ ಆದ ಅಪಮಾನ ಅಷ್ಟಿಷ್ಟಲ್ಲ. ಅವನು ಶಾಯಿಸ್ತೆಖಾನನಿಗೆ ಶಿಕ್ಷೆ ಎಂದು ಹೇಳಿ ಬಂಗಾಳಕ್ಕೆ ವರ್ಗಾಯಿಸಿದ.
 ಅದಕ್ಕಾಗಿ ಅವನು ಒಂದು ಧೂರ್ತ ತಂತ್ರ ಯೋಚಿಸಿ: ಸಿಂಹದ ಮೇಲೆ ಕಾದಾಡಲು ಸಿಂಹವನ್ನೇ ಕಳಿಸಬೇಕು. ಆ ಕೆಲಸಕ್ಕೆ ರಾಜಾ ಜಯಸಿಂಹನನ್ನು ಆರಿಸಿದ. ಜಯಸಿಂಹ ಮಹಾಶೂರ, ಜಾಣ ಸರದಾರ.  ಜಯಸಿಂಹ ತನ್ನ ಭಾರಿ ಸೈನ್ಯದೊಂದಿಗೆ ದಕ್ಷಿಣಕ್ಕೆ ಇಳಿದುಬಂದ. ಬಂದವನೇ ಬಿಜಾಪುರ ಸುಲ್ತಾನನನ್ನು ತನ್ನ ಕಡೆಗೆ ಒಲಿಸಿಕೊಂಡ.  ಆಗ ಒಂದು ದಿನ ಇದ್ದಕ್ಕಿದ್ದಂತೆ ಶಿವಾಜಿಯೇ ಜಯಸಿಂಹನಿಗೆ ಸ್ನೇಹಸಂಧಿಯ ಪತ್ರ ಬರೆದ. ಅಲ್ಲದೆ ಸ್ವತಃ ಶಿವಾಜಿ ಜಯಸಿಂಹನನ್ನು ಕಂಡು, “ದಿಲ್ಲಿ ಬಾದಶಹನಿಗೆ ಇನ್ನು ಮುಂದೆ ನಿಷ್ಠೆಯಿಂದಿರುವೆ”, ಎಂದೂ ಹೇಳಿದ.
ಸಹ್ಯಾದ್ರಿಯ ಬೆಟ್ಟಗಳಲ್ಲಿ ಸ್ವತಂತ್ರವಾಗಿ ಬೆಳೆದ ಸಿಂಹ ಶಿವಾಜಿ. ಅಂತಹವನು ಈ ರೀತಿ, ಏಕಾಏಕಿ ದಿಲ್ಲಿ ನರಿಗೆ ತಲೆಬಾಗುವುದೆಂದರೇನು? ಎಲ್ಲರೂ ಚಕಿತರಾದರು. ಆದರೆ ಅದರಲ್ಲಿ ಒಂದು ರಹಸ್ಯ ತಂತ್ರವಿದ್ದಿರಬೇಕೆಂದು ಅನೇಕರ ಊಹೆ. ಔರಂಗಜೇಬನಿಗೆ ಗುಲಾಮನಾದಂತೆ ನಟಿಸಿ ದಿಲ್ಲಿಗೆ ಹೋಗಿ ಪ್ರತ್ಯಕ್ಷ ಭೇಟಿಯಲ್ಲಿ ಔರಂಗಜೇಬನನ್ನೇ ಏಕೆ ಮುಗಿಸಬಾರದು, ಎಂದು ಶಿವಾಜಿಯ ಆಲೋಚನೆ ಇದ್ದಿರಬಹುದು. ಅವನ ಜೀವನದಲ್ಲಿ ಎಲ್ಲಕ್ಕಿಂತ ಹೆಚ್ಚಿನ ಸಾಹಸ, ಚಾತುರ್ಯದಿಂದ ಕೂಡಿದ ಯೋಜನೆ ಅದು. ಅದರಂತೆ ಶಿವಾಜಿ ಔರಂಗಜೇಬನ ಭೇಟಿಗೆ ಹೊರಟ, ಮಗ ಸಂಭಾಜಿಯನ್ನೂ ಕರೆದುಕೊಂಡು ಹೊರಟ. ಇತ್ತ ಸ್ವರಾಜ್ಯದಲ್ಲಿನ ಪ್ರಜೆಗಳಿಗೆ ಎಲ್ಲರಿಗೂ ಕಾಳಜಿಯೇ ಕಾಳಜಿ. ಅತ್ತ ದಾರಿಯುದ್ದಕ್ಕೂ ಹಿಂದು ಜನರು ಶಿವಾಜಿಯನ್ನು ಸ್ವಾಗತಿಸಿದರು. – ತಮ್ಮ ಉದ್ಧಾರಕನೆಂದು ಅವನನ್ನು ಕಣ್ತುಂಬ ನೋಡಿ ಭಕ್ತಿಯಿಂದ ನಮಸ್ಕರಿಸಿದರು. ಔರಂಗಜೇಬನ ಭೇಟಿಗೆಂದು ಶಿವಾಜಿ ಆಗ್ರಾಕ್ಕೆ ತಲುಪಿದ. ಆದರೆ ಔರಂಗಜೇಬನೂ ಮಹಾಘಾಟಿ. ಅವನು ಶಿವಾಜಿಯನ್ನು ತನ್ನ ಹತ್ತಿರ ಬರಲು ಬಿಡಲೇ ಇಲ್ಲ. ದರ್ಬಾರಿನಲ್ಲಿ ದೂರದಲ್ಲಿಯೇ ಶಿವಾಜಿಯನ್ನು ನಿಲ್ಲಿಸಿದ. ಅದರಿಂದ ಶಿವಾಜಿಗೆ ತುಂಬ ನಿರಾಶೆಯಾಯಿತು. ಶಿವಾಜಿಗೆ ಅಪಮಾನವಾಗುವಂತೆಯೂ ಔರಂಗಜೇಬ ನಡೆದುಕೊಂಡ. ಶಿವಾಜಿಯನ್ನು ಗೌರವದಿಂದ ನಡೆಸಿಕೊಳ್ಳುವುದಾಗಿ ಹೇಳಿದ್ದ ಮಾತಿಗೆ ಔರಂಗಜೇಬ ತಪ್ಪಿದ. ಸರಿ, ದರ್ಬಾರಿನಲ್ಲೆ ಶಿವಾಜಿ ಕೆರಳಿ ಕೆಂಡವಾದ. ಔರಂಗಜೇಬನನ್ನು ಲೆಕ್ಕಿಸದೆ ದರ್ಬಾರಿನಿಂದ ಹೊರಕ್ಕೆ ಹೊರಟುಬಂದ.
ಈಗ ನಿಜಕ್ಕೂ ಶಿವಾಜಿ ದೊಡ್ಡ ಅಪಾಯಕ್ಕೆ ಗುರಿಯಾದ. ಏಕೆಂದರೆ ಕೈಗೆ ಸಿಕ್ಕ ವೈರಿಯನ್ನು ಬಿಟ್ಟು ಕೊಡುವಷ್ಟು ಔರಂಗಜೇಬ ದಡ್ಡನಾಗಿರಲಿಲ್ಲ. ಅವನು ಶಿವಾಜಿಯನ್ನು ಕೂಡಲೇ ಸೆರೆಯಲ್ಲಿಟ್ಟ. ಅವನನ್ನು ಕತ್ತರಿಸಿ ಹಾಕುವಂತೆಯೂ ಆಜ್ಞಾಪಿಸಿದ!
ಆದರೆ ಅಂತಹ ಗಂಡಾಂತರದ ಗಳಿಗೆಯಲ್ಲಿಯೂ ಶಿವಾಜಿ ಎದೆಗೆಡಲಿಲ್ಲ. ಅವನ ಬುದ್ಧಿ ಸಾಹಸ ಆಗಲೂ ಅತ್ಯಂತ ಉಜ್ವಲವಾಗಿ ಬೆಳಗಿತು. ಇದ್ದಕ್ಕಿದಂತೆ ಶಿವಾಜಿಗೆ “ಜ್ವರ” ಬಂದಿತು. “ಖಾಯಿಲೆ” ಜೋರಾಯಿತು. ತನ್ನ ಜೊತೆಯಲ್ಲಿ ಬಂದ ಮಾರಾಠಾ ಸೇನೆ ವಾಪಸ್ಸು ಹೋಗಲು ಔರಂಗಜೇಬನಿಂದ ಶಿವಾಜಿ ಅನುಮತಿ ಬೇಡಿದ. ಸದ್ಯ ಒಳ್ಳೆಯದೇ ಆಯಿತೆಂದು ಔರಂಗಜೇಬ ಸಂತೋಷದಿಂದ “ಆಗಲಿ” ಎಂದ! ಶಿವಾಜಿ ತನ್ನ “ಖಾಯಿಲೆ” ಗುಣವಾಗಲೆಂದು ಊರಿನ ಫಕೀರರಿಗೆ, ಸಂನ್ಯಾಸಿಗಳಿಗೆ ನಿತ್ಯ ಮಿಠಾಯಿ ಹಂಚತೊಡಗಿದ. ಊರಿನ ಶ್ರೀಮಂತರಿಗೂ ಅವನಿಂದ ಉಡುಗೊರೆಗಳು ಹೋಗತೊಡಗಿದವು. ಇವೆಲ್ಲಕ್ಕೂ ಔರಂಗಜೇಬನೇ ಅನುಮತಿ ಕೊಟ್ಟ. ಅವನಂತಹ ಮಹಾಧೂರ್ತನಿಗೂ ಯಾವ ಸಂದೇಹವೂ ಬರಲಿಲ್ಲ! ಹಕೀಮರು, ವೈದ್ಯರು ಯಾರಿಗೂ ಜಗ್ಗಲಿಲ್ಲ “ಖಾಯಿಲೆ”. ಶಿವಾಜಿಯನ್ನು ವಧಿಸಬೇಕೆಂದು ಔರಂಗಜೇಬನು ನಿಶ್ಚಯಿಸಿದ್ದ ದಿನಕ್ಕೆ ಹಿಂದಿನ ದಿನ ಬೆಳಗಾಯಿತು. ಶಿವಾಜಿಗೆ “ಖಾಯಿಲೆ” ವಿಕೋಪಕ್ಕೆ ಹೋಗಿ “ಪ್ರಜ್ಞೆ ತಪ್ಪಿತು.”
ನಿತ್ಯದಂತೆ ಅಂದೂ ಮಿಠಾಯಿ ಬುಟ್ಟಿಗಳು ಒಳಕ್ಕೆ ಬಂದವು. ಸಕತ್‌”ಖಾಯಿಲೆ” ಆಗಿ ಮಲಗಿದ್ದ ಶಿವಾಜಿ ಚಂಗನೆ ಹಾರಿ ಒಂದು ಬುಟ್ಟಿಯಲ್ಲಿ ಕುಳಿತ. ಇನ್ನೊಂದರಲ್ಲಿ ಸಂಭಾಜಿ. ಕೂಡಲೇ ಬುಟ್ಟಿಗಳನ್ನು ಮುಚ್ಚಿ, ಬೋವಿಗಳೂ ಅವನ್ನು ಎತ್ತಿಕೊಂಡು ಹೊರಕ್ಕೆ ಹೊರಟರು.
ದಿನವೂ ಎಲ್ಲ ಬುಟ್ಟಿಗಳನ್ನು ತೆಗೆದು ತೆಗೆದು ನೋಡುತ್ತಿದ್ದ ಕಾವಲುಗಾರರಿಗೆ ಅವು ಬರಿಯ ಮಿಠಾಯಿ ಬುಟ್ಟಿಗಳೆಂದು ಈ ವೇಳೆಗೆ ಖಾತ್ರಿಯಾಗಿ ಹೋಗಿತ್ತು. ಅಂದೂ ಸಹ ಮುಂಚೆ ಹೊರಟ ಒಂದೆರಡು ಬುಟ್ಟಿಗಳನ್ನು ಕಾವಲುಗಾರ ಮುಖಂಡ ಪೋಲಾದಖಾನ ಇಳಿಸಿ ನೋಡಿದ. ಬರಿಯ ಮಿಠಾಯಿ. ಆಕಸ್ಮಾತ್ ಶಿವಾಜಿ, ಸಂಭಾಜಿ ಕುಳಿತಿದ್ದ ಬುಟ್ಟಿಗಳನ್ನೇ ಏನಾದರೂ ತೆಗೆದುನೋಡಬೇಕೆಂದು ಖಾನನಿಗೆ ಅನಿಸಿದಲ್ಲಿ, ಏನು ಗತಿ? ಆದರೆ ಭವಾನಿಯ ಕೃಪೆ. ಖಾನನ ಮೈಮರೆವು. ಪೋಲಾದ ಖಾನನು “ಅಚ್ಚಾ ಜಾನೇ ದೋ” ಎಂದ. “ಜಾನೇ ದೋ” (ಬದುಕಿಕೊಳ್ಳಲಿ ಬಿಡು) ಎಂದು ಅವನ ಮಾತಿನ ಅರ್ಥ ವಾಯಿತು. ಅಲ್ಲವೇ ?
ಒಳಗೆ ಕೊಠಡಿಯಲ್ಲಿ ಶಿವಾಜಿ ಮಲಗಿದ್ದ ಜಾಗದಲ್ಲಿ ತಕ್ಷಣವೇ ಹೀರೋಜಿ ಎಂಬ ಶಿವಾಜಿಯ ಸಂಗಡಿಗ ಹೋಗಿ ಮಲಗಿದ. ಶಿವಾಜಿಯು ಕೊಟ್ಟಿದ್ದ ರಾಜ ಉಂಗುರವನ್ನು ತನ್ನ ಬೆರಳಿಗೆ ಅವನು ತೊಟ್ಟುಕೊಂಡ. ಆ ಕೈಯನ್ನು ಮಾತ್ರ ಹೊರಗೆ ಚಾಚಿ ಮುಸುಕು ಹೊದ್ದುಕೊಂಡು ಮಲಗಿದ. ಮದಾರಿ ಎನ್ನುವ ಇನ್ನೊಬ್ಬ ಹುಡುಗ ಏನೂ ಅರಿಯದವನಂತೆ ಅವನ ಕಾಲೊತ್ತುತ್ತಾ. ಕೂತ. ಆಗಿಂದಾಗ್ಯೆ ಪೋಲಾದಖಾನ ಒಳಕ್ಕೆ ಬಂದು “ಶಿವಾಜಿ”ಯ ಸ್ಥಿತಿಯನ್ನು ನೋಡಿಕೊಂಡು ಹೋಗುತ್ತಿದ್ದ. ಹೀಗೆಯೇ ಸಂಜೆ ಕಳೆದು ರಾತ್ರಿ ಆಯಿತು. ಆಗ ಮಲಗಿದ್ದ “ಶಿವಾಜಿ” ಮೆಲ್ಲಗೆ ಎದ್ದ. ಹಾಸಿಗೆ, ದಿಂಬುಗಳನ್ನೇ ಮನುಷ್ಯನ ಆಕೃತಿ ಮಾಡಿ ಅವನನ್ನು ಅದೇ ಜಾಗದಲ್ಲಿ ಮಲಗಿಸಿದ. ತನ್ನ ನಿತ್ಯದ ವೇಷ ಧರಿಸಿ ಹೀರೋಜಿ ಹೊರಗೆ ಬಂದು ಕಾವಲುಭಟರಿಗೆ “ಶಿವಾಜಿಯ ಸ್ಥಿತಿ ತೀರ ಕೆಟ್ಟಿದೆ, ಈಗಲೋ, ಆಗಲೋ, ಒಳಕ್ಕೆ ಯಾರನ್ನೂ ಬಿಡಬೇಡಿ. ನಾನು ಈಗಲೇ ಔಷಧ ತರುತ್ತೇನೆ” ಎಂದು ಹೇಳಿ ಹೊರಟ. ಮದಾರಿಯೂ ತೆಪ್ಪಗೆ ಅವನನ್ನು ಹಿಂಬಾಲಿಸಿದ. ಅವರು ಹೋದವರು, ಹಾಗೆಯೇ ಹೊರಟೇ ಹೋದರು. ಒಳಗೆ ಮಂಚದ ಮೇಲೆ “ಶಿವಾಜಿ” ಶಾಂತವಾಗಿ ಮಲಗಿಯೇ ಇದ್ದ. ಹೊರಗೆ ಬಿಚ್ಚುಗತ್ತಿಯ ಪಹರೆ ನಡೆದೇ ಇತ್ತು !
ಮರುದಿನ ಬೆಳಗಾಯಿತು. ಅಂದೇ ಶಿವಾಜಿಯನ್ನು ಕೊಲ್ಲಬೇಕಾಗಿದ್ದ ದಿನ. ಪೋಲಾದಖಾನ ಬಂದ. ಇಡೀ ಮನೆ ಅಷ್ಟು ಶಾಂತವಾಗಿರುವುದನ್ನು ಕಂಡು ಅವನಿಗೆ ಏನೋ ಸಂಶಯ. ಒಳಗೆ ಬಂದ. “ಶಿವಾಜಿ” ಮಲಗಿದ್ದುದು ಕಣ್ಣಿಗೆ ಬಿತ್ತು. ಸದ್ಯ, ಖಾನನಿಗೆ ಜೀವದಲ್ಲಿ ಜೀವ ಬಂದಿತು. ಆದರೆ ಇದೇನು ಆಲುಗಾಟವೇ ಇಲ್ಲವಲ್ಲ ? ಶಿವಾಜಿ ಏನಾದರೂ ಸತ್ತು ಗಿತ್ತು ಹೋದನೆ ? ಎಂದು ಖಾನ ಹತ್ತಿರ ಬಂದು ಶಾಲು ತೆಗೆದು ನೋಡಿದ. ಬರಿಯ ದಿಂಬು, ಹಾಸಿಗೆ ಸುರುಳಿ ! ಶಿವಾಜಿ ಅದೃಶ್ಯನಾಗಿದ್ದ! ಮಾಂಸ ಮೂಳೆಯ ಶಿವಾಜಿ ಹಾಸಿಗೆ ದಿಂಬುಗಳಾಗಿದ್ದ! ಪೋಲಾದ ಖಾನನಿಗೆ, ಅವನಿಗಿಂತ ಹೆಚ್ಚಾಗಿ ಔರಂಗಜೇಬನಿಗೆ, ಹೇಗೆ ಅನಿಸಿರಬೇಕೆಂದು ನೀವೇ ಊಹಿಸಿ ! ಒಂದೇ ಸಲಕ್ಕೆ ಸಾವಿರ ಚೇಳು ಕುಟುಕಿದಂತೆ ಅವರಿಗೆ ಆಗಿರಬೇಕಲ್ಲ ? ಕೂಡಲೇ ಶಿವಾಜಿಯನ್ನು ಹಿಡಿದು ತರಲು ಔರಂಗಜೇಬ ನಾಲ್ಕೂ ದಿಕ್ಕಿಗೆ ತನ್ನ ಸೈನ್ಯ ಅಟ್ಟಿದ.
ಅಷ್ಟು ಹೊತ್ತಿಗಾಗಲೇ ಶಿವಾಜಿ, ಸಂಭಾಜಿ ತಮಗಾಗಿ ಊರಾಚೆ ಕಾದಿರಿಸಿದ್ದ ಕುದುರೆಗಳನ್ನೇರಿ ವಾಯುವೇಗದಲ್ಲಿ ದಕ್ಷಿಣ ದಿಕ್ಕಿನಲ್ಲಿ ಪರಾರಿಯಾಗಿದ್ದರು. ದಾರಿಯುದ್ದಕ್ಕೂ ಸಮರ್ಥ ರಾಮದಾಸರ ಮಠಗಳು ಅವರಿಗೆ ರಕ್ಷಣೆ ಕೊಟ್ಟವು. ಗೋಸಾಯಿ-ಬೈರಾಗಿಗಳ ವೇಷ ಹಾಕಿಕೊಂಡು ಕೊನೆಗೂ ಶಿವಾಜಿ ರಾಜಗಡಕ್ಕೆ ಬಂದು ತಲುಪಿದ. 
ಶಿವಾಜಿ ಆಗ್ರಾದಿಂದ ತಪ್ಪಿಸಿಕೊಂಡು ಬಂದ ಸುದ್ದಿ ಕೇಳಿ ದಕ್ಷಿಣದ ಎಲ್ಲ ವೈರಿಗಳ ಜಂಘಾಬಲವೇ ಉಡುಗಿ ಹೋಯಿತು. ಅಷ್ಟೇಕೆ, ಇಡೀ ಹಿಂದುಸ್ಥಾನದಲ್ಲಿ ಶಿವಾಜಿಯ ಖ್ಯಾತಿ ಹಬ್ಬಿತ್ತು. ಔರಂಗಜೇಬನಂತಹ ಮಹಾ ಕಪಟಿಯ ಕೈಯಿಂದ, ಅವನ ಸ್ವಂತ ರಾಜಧಾನಿಯಿಂದ, ಇಪ್ಪತ್ತುನಾಲ್ಕು ಘಂಟೆಯೂ ಬಿಚ್ಚುಗತ್ತಿ ಪಹರೆಯ ನಡುವಿನಿಂದ ಔರಂಗಜೇಬನ ಮೂಗಿಗೇ ಸುಣ್ಣ ಹಚ್ಚಿ ಶಿವಾಜಿ ತಪ್ಪಿಸಿಕೊಂಡು ಬಂದಿದ್ದ. ಒಂದೂವರೆ ಸಾವಿರ ಮೈಲಿ ಉದ್ದಕ್ಕೂ ಮೊಗಲ ಸೈನಿಕರ ಕಣ್ಣಿಗೆ ಮಣ್ಣೆರಚಿ ಬಂದಿದ್ದ. ಇಡೀ ಪ್ರಪಂಚದಲ್ಲೇ ಇಂತಹ ಚಾತುರ್ಯ, ಇಂತಹ ಸಾಹಸವನ್ನು ಯಾರು ಕಂಡು ಕೇಳಿರಲಿಲ್ಲ.
ಶಿವಾಜಿ ಮಹಾರಾಜರು ಮೊಳಗಿಸಿದ ‘ಹಿಂದವೀ ಸ್ವರಾಜ್ಯ’ ದ ಮಹನ್ಮಂಗಲ ಮಂತ್ರ ಕೇವಲ ಮಹಾರಾಷ್ಟ್ರದ್ದು ಮಾತ್ರವಲ್ಲ, ಇಡೀ ಭಾರತದ ಹೃದಯತಂತಿಯನ್ನು ಮೀಟಲು ಸಮರ್ಥವಾಯಿತು.ಶಿವಾಜಿ ಮಹಾರಾಜರ ಜೀವ ಅನ೦ತ ಕೋಟಿ ಹಿ೦ದುಗಳ ಮನದಲ್ಲಿ 1680 ಏಪ್ರಿಲ್ 3ರ೦ದು ಲೀನವಾಯಿತು
ಸಾಮಾನ್ಯರಲ್ಲಿ ಅಸಮಾನ್ಯರಾಗಿ ಬೆಳೆದ ಶಿವಾಜಿ ತನ್ನ ಆಡಳಿತದಲ್ಲಿ ಒಟ್ಟಾರೆಯಾಗಿ 280 ದುರ್ಗಗಳನ್ನು ಗೆದ್ದಿದ್ದರು.
ರಜಪೂತ ಸಿಕ್ಕರ೦ತಹ ರಾಜಮನೆತನಗಳು ಅಲುಗಾಡಿಸಲಾಗದ ಮೊಘಲ ಸಾಮ್ರಾಜ್ಯವನ್ನು ಸಾಮಾನ್ಯ ಸಾಮ೦ತನ ಮಗ ಶಿವಾಜಿ ತನ್ನ ಪರಾಕ್ರಮ ಯುಕ್ತಿಯಿ೦ದ ಬುಡಮೇಲು ಮಾಡಿದ್ದ.“ದುಷ್ಟರು ನಾಶವಾದರು. ದೇಶ ಧರ್ಮಗಳು ಉದ್ಧಾರವಾದವು. ಆನಂದಮಯ ಸಾಮ್ರಾಜ್ಯ ನಿರ್ಮಾಣವಾಯಿತು.”
ತನ್ನ ಆಡಳಿತದಲ್ಲಿ ಶಿಕ್ಷಣ ವ್ಯವಸ್ತೆಗೆ ಒತ್ತುಕೊಟ್ಟಿದ್ದರು ವಿದ್ಯಾಭ್ಯಾಸದಲ್ಲಿ ಆಸಕ್ತಿ ಇರದ ವಿದ್ಯಾರ್ಥಿಗಳಿಗೆ ತಮ್ಮ ಕುಲಕಸುಬು ಮಾಡಲು ಪ್ರೇರೇಪಿಸುತ್ತಿದ್ದರು.. ಮತ್ತು ಆಸಕ್ತ ವಿದ್ಯಾರ್ಥಿಗಳನ್ನು ಮಹಾರಾಷ್ಟ್ರದಲ್ಲಿ ವಿದ್ಯಾಭ್ಯಾಸ ಕಲಿಸಿ ಉನ್ನತವಾದ ಅಭ್ಯಾಸಕ್ಕೆ ಕಾಶಿಗೆ ಕಳಿಸಿ ಪ್ರೋತ್ಸಾಹಿಸುತ್ತಿದ್ದರು.
ಶಿವಾಜಿ ಮರಣದ ಬಳಿಕ ಹಿ೦ದವಿ ಸ್ವರಾಜದ ಪಟ್ಟ ಮಗ “ಸಾ೦ಭಾಜಿ”ಗೆ ಒದಗುತ್ತದೆ,, ಶಿವಾಜಿಯ ಹೆಸರನ್ನು ಮರಣದ ನ೦ತರವು ಉತ್ತು೦ಗಕ್ಕೆ ಏರಿಸಿದ ಯಶಸ್ಸು “ಸಾ೦ಭಾಜಿ”ಗೆ ದೊರಕುತ್ತದೆ.
ನಮ್ಮ ದೇಶ ಅಷ್ಟೇ ಯಾಕೆ ವಿಯೆಟ್ನಾಂ ಎ೦ಬ ಪುಟ್ಟ ದೇಶ ಅಮೆರಿಕಾದ ಜೊತೆ ಸವಾಲೊಡ್ಡಿ ಗೆದ್ದಿತು ಅಲ್ಲಿ ಕೂಡ ಶಿವಾಜಿಯ ಯುದ್ದತ೦ತ್ರ ಉಪಯೋಗಿಸಲಾಗಿತ್ತು ಆ ದೇಶಕ್ಕೂ ಕೊಡ ನಮ್ಮ ಹಿ೦ದುಗಳ ಆರಾಧ್ಯ ದೈವ “ಶಿವಾಜಿ ಮಹಾರಾಜರೆ ಸ್ಫೂರ್ತಿ”
ಅ೦ದು ಮಹಾನ್ ತಾಯಿ ಜಿಜಾಮಾತೆ ಹಿ೦ದವಿ ಸಾಮ್ರಾಜ್ಯ ಕಟ್ಟಲೇಬೇಕು ಎ೦ಬ ನಿರ್ಧಾರ ತೆಗೆದುಕೊಂಡಿದ್ದರಿ೦ದ ಇ೦ದು ನಾವು ಹಿ೦ದು ಧರ್ಮದಲ್ಲಿದ್ದೀವಿ.
ಹಾಗೆಯೇ,,,
ಇ೦ದು ನಾವು ಧರ್ಮಕ್ಕಾಗಿ, ಧರ್ಮರಕ್ಷಣೆಗಾಗಿ ಒ೦ದು ಪ್ರಮುಖ ನಿರ್ಧಾರ ಕೈಗೊಳ್ಳುವುದರೊ೦ದಿಗೆ ಶಿವಾಜಿಯನ್ನು ಮನದಲ್ಲಿ ನೆಲೆಸುವಂತೆ ಮಾಡೋಣ.
ಜೈ ಹಿಂದವಿ ಸ್ವರಾಜ್
Mahesh Hiremath

loading...

Post a Comment

Powered by Blogger.