veerakesari.in
ಬೆಂಗಳೂರಿನಲ್ಲಿ ನಡೆದ ಆರ್ ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆಗಳಾದ ಆಲ್ ಉಮರ್ ಮತ್ತು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗಳ ಕೈವಾಡವಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.
ಕೊಲೆ ಪ್ರಕರಣದಲ್ಲಿ ಆರೋಪಿ, ಪಿಎಫ್‌ಐ ನ ನಾಯಕ ಅಸೀಂ ಷರೀಫ್, ವಾಸೀಂ ಅಹಮದ್, ಮುಜೀಬ್, ಸಿದ್ದಿಕಿ, ಇರ್ಫಾನ್ ಪಾಷಾ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹ ಅವರಿದ್ದ ಏಕಸದಸ್ಯಪೀಠದ ಮುಂದೆ ಎಸ್‌ಪಿಪಿ-2 ಸಂದೇಶ್ ಜೆ.ಚೌಟ ಗುರುವಾರ ಈ ವಿಷಯ ತಿಳಿಸಿದರು.
''ನೆರೆಯ ತಮಿಳುನಾಡು ನಿಷೇಧಿಸಿರುವ ಆಲ್ ಉಮರ್ ಸಂಘಟನೆಗೆ ಸೇರಿದ ಆರೋಪಿಗಳು,ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ನಾಯಕರ ಜೊತೆ ಸತತ ಸಂಪರ್ಕದಲ್ಲಿದ್ದರು. ಅದಕ್ಕೆ ಆರೋಪಿಗಳಿಂದ ವಶಪಡಿಸಿಕೊಂಡಿರುವ ಮೊಬೈಲ್ ಸಂಭಾಷಣೆಯ ವಿವರಗಳಿವೆ''ಎಂದು ವಿವರಿಸಿದರು.
''ಬಂಧಿತ ಆರೋಪಿಗಳೇ ನೀಡಿರುವ ಸ್ವಯಂ ಹೇಳಿಕೆಯಂತೆ ಅವರೆಲ್ಲಾ ವ್ಯವಸ್ಥಿತ ಸಂಚು ಅಥವಾ ಪಿತೂರಿ ರೂಪಿಸಿ ಈ ಕೊಲೆ ಮಾಡಿದ್ದಾರೆ.ಒಂದೇ ಸಮುದಾಯದ ಅಥವಾ ಸಂಘಟನೆಯ ನಾಯಕರನ್ನು ಮುಗಿಸುವ ಸಲುವಾಗಿಯೇ ಅವರಿಗೆ ವಿಶೇಷ ತರಬೇತಿ ನೀಡಲಾಗಿತ್ತು.ಅದರಲ್ಲೂ ವಿಶೇಷವಾಗಿ ಒಂದೇ ಎಟಿಗೆ ಕುತ್ತಿಗೆಗೆ ಹೊಡೆದು ಕೊಲ್ಲುವುದಕ್ಕೆ ಹಿಂದಿನ ಕೃತ್ಯಗಳ ವಿಡಿಯೋ ದೃಶ್ಯಾವಳಿ ತೋರಿಸಿ ಅವರಿಗೆ ತರಬೇತಿ ಕೊಡಲಾಗಿತ್ತು. ಕುತ್ತಿಗೆಗೆ ಒಂದೇ ಬಲವಾದ ಹೊಡೆತ ನೀಡುವುದರಿಂದ ಮೆದುಳಿಗೆ ರಕ್ತ ಸಂಚಲನೆ ನಿಂತು ಹೋಗಿ ವ್ಯಕ್ತಿ ಸಾವನ್ನಪುತ್ತಾನೆ. ಅದೇ ಮಾದರಿಯನ್ನು ರುದ್ರೇಶ್ ಕೊಲ್ಲಲು ಬಳಕೆ ಮಾಡಲಾಗಿದೆ''ಎಂದು ಸಂದೇಶ್ ಚೌಟ ಹೇಳಿದರು.
ಪ್ರಕರಣದ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ತೀರ್ಪು ಕಾಯ್ದಿರಿಸಿತು.
ಕೇಂದ್ರ ಸರಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ನಾವಡಗಿ,'' ಈ ಪ್ರಕರಣದಲ್ಲಿ ವೈಯಕ್ತಿಕ ಹಿತಾಸಕ್ತಿಗಿಂತ ರಾಷ್ಟ್ರದ ಭದ್ರತೆ ಹಾಗೂ ಏಕತೆಯ ದೃಷ್ಟಿಯಿಂದ ಎನ್‌ಐಎ ತನಿಖೆ ಕೈಗೆತ್ತಿಕೊಂಡಿದೆ. ನ್ಯಾಯಾಲಯ ಆರೋಪಿಗಳ ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ಕೋರಿದರು.
ಆರ್.ಎಸ್.ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ :
2016ರ ಅಕ್ಟೋಬರ್ ತಿಂಗಳಿನಲ್ಲಿ ಶಿವಾಜಿನಗರದಲ್ಲಿರುವ ಕಾಮರಾಜ ರಸ್ತೆ ಬಳಿ ಬೈಕ್ ನಲ್ಲಿ ಬಂದ ಕೆಲ ದುಷ್ಕರ್ಮಿಗಳು ರುದ್ರೇಶ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಪ್ರಕರಣ ಸಂಬಂಧ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆರನೇ ಆರೋಪಿ ಈಗಲೂ ತಲೆಮರೆಸಿಕೊಂಡಿದ್ದಾನೆ.
Source - Udayavani
loading...
Post a Comment