Veerakesari 17:48
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ನಡೆಸುತ್ತಿದ್ದ ಅಪ್ರಚೋದಿತ ಗುಂಡಿನ ದಾಳಿಯಿಂದಾಗಿ ಕಟ್ಟದೊಳಗೆ ಸಿಲುಕಿ ಹಾಕಿಕೊಂಡಿದ್ದ 200 ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಭಾರತೀಯ ಸೇನೆ ರಕ್ಷಣೆ ಮಾಡಿದ್ದು, ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿರುವ ಘಟನೆ ಮಂಗಳವಾರ ನಡೆದಿದೆ. 
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡು ಹಾಗೂ ಶೆಲ್ ಗಳ ದಾಳಿ ನಡೆಸುತ್ತಿತ್ತು. ಇದರ್ದೆ. ಕಾಶ್ಮೀರದ ಗುರೇಜ್ ಸೆಕ್ಟರ್ ಬಳಿ ಉಗ್ರರು ಗಡಿ ನುಸುಳಲು ಯತ್ನ ನಡೆಸುತ್ತಿದ್ದರು. 
ಗಡಿಯಲ್ಲಿರುವ ಕಟ್ಟಡವೊಂದರಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿದ್ದರು. ಪಾಕಿಸ್ತಾನ ಸೇನೆ ನಡೆಸುತ್ತಿದ್ದ ಅಪ್ರಚೋದಿತ ಗುಂಡಿನ ದಾಳಿಗೆ ಕಟ್ಟಡದಿಂದ ಹೊರ ಬರಲಾರದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರಾಣಾಪಾಯದಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ ಅಪ್ರಚೋದಿತ ಗುಂಡಿನ ದಾಳಿಗೆ ದಿಟ್ಟ ಉತ್ತರ ನೀಡಿದ ಭಾರತೀಯ ಸೇನೆ 200 ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ರಕ್ಷಣೆ ಮಾಡಿದೆ. ಅಲ್ಲದೆ, ಗಡಿ ನುಸುಳಲು ಯತ್ನ ನಡೆಸುತ್ತಿದ್ದ ಇಬ್ಬರು ಉಗ್ರರನ್ನು ಸದೆಬಡಿದಿದೆ. ಗುಂಡಿನ ಚಕಮಕಿ ವೇಳೆ ಇಬ್ಬರು ಭಾರತೀಯ ಯೋಧರೂ ಕೂಡ ಹುತಾತ್ಮರಾಗಿದ್ದಾರೆಂದು ತಿಳಿದುಬಂದಿದೆ. 
ಈ ಕುರಿತಂತೆ ಮಾಹಿತಿ ನೀಡಿರುವ ಶ್ರೀನಗರ ರಕ್ಷಣಾ ವಕ್ತಾರ ಕರ್ನಲ್ ರಾಜೇಶ್ ಕಲಿಯಾ ಅವರು, ಕುಪ್ವಾರ ಜಿಲ್ಲೆಯ ನೌಗಾಂ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರ ರೇಖೆ ಬಳಿ ಭಾರತೀಯ ಸೇನೆಯನ್ನು ಗುರುಯಾಗಿಸಿಕೊಂಡು ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿತ್ತು. ಈ ವೇಳೆ ಭಾರತೀಯ ಸೇನೆ ಕೂಡ ದಿಟ್ಟ ಉತ್ತರವನ್ನು ನೀಡಿದೆ. ಗುಂಡಿನ ಚಕಮಕಿ ವೇಳೆ 2 ಯೋಧರು ಹುತಾತ್ಮರಾಗಿದ್ದಾರೆಂದು ತಿಳಿಸಿದ್ದಾರೆ. 
ಗಡಿಯಲ್ಲಿ ಪಾಕಿಸ್ತಾನ ಸೇನೆ ನಡೆಸುತ್ತಿದ್ದ ಗುಂಡಿನ ದಾಳಿಗೆ ವಿಮಲ್ ಸಿಂಜಾಲಿ ಎಂಬ ಯೋಧ ಹುತಾತ್ಮರಾಗಿದ್ದಾರೆ. ಮತ್ತೊಬ್ಬ ಯೋಧನಿಗೆ ಗಂಭೀರವಾಗಿ ಗಾಯಗಳಾಗಿತ್ತು. ಗಾಯಗೊಂಡ ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಹುತಾತ್ಮರಾದರು ಎಂದು ತಿಳಿಸಿದ್ದಾರೆ. 
ಗಡಿಯಲ್ಲಿ ಪಾಕಿಸ್ತಾನ ಸೇನೆ ನಡೆಸುತ್ತಿದ್ದ ನಿರಂತರ ಅಪ್ರಚೋದಿತ ಗುಂಡಿನ ದಾಳಿ ಹಿನ್ನಲೆಯಲ್ಲಿ ನೌಶೆರಾ ಹಾಗೂ ರಜೌರಿ ಜಿಲ್ಲೆಗಳ ಕಡಾಲಿ, ಸೆಹಾರ್ ಮತ್ತು ಭವಾನಿ ಪ್ರದೇಶದಲ್ಲಿದ್ದ ಮೂರು ಶಾಲೆಗಳ ಕಟ್ಟಡಗಳಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಿಲುಕಿಕೊಂಡಿದ್ದರು. 
ಕಡಾಲಿ ಪ್ರಾಥಮಿಕ ಶಾಲೆಯಲ್ಲಿ 12 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು. ನಂತರ ಶಾಲೆಯ ಆಡಳಿತ ಮಂಡಳಿಯ ಅಧಿಕಾರಿಗಳು ಗುಂಡಿನ ದಾಳಿಗಳ ನಡುವೆಯೂ ಸ್ಥಳೀಯರ ಸಹಾಯದೊಂದಿಗೆ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದಾರೆ. ಕಟ್ಟಡದೊಳಗೆ ಸಿಲುಕಿಕೊಂಡಿದ್ದ ವಿದ್ಯಾರ್ಥಿಗಳ ರಕ್ಷಣೆಗಾಗಿ ಸೇನೆ ಹಾಗೂ ಪೊಲೀಸರ 5 ಬುಲೆಟ್ ಫ್ರೂಫ್ ವಾಹನಗಳನ್ನು ಬಳಕೆ ಮಾಡಲಾಯಿತು. 
ಇದಾದ ಬಳಿಕ ಭವಾನಿ ಪ್ರದೇಶದಲ್ಲಿದ್ದ ಸರ್ಕಾರಿ ಶಾಲೆಯೊಂದರ ಕಟ್ಟದಲ್ಲಿ 150 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು. ನಂತರ ವಿದ್ಯಾರ್ಥಿಗಳನ್ನು ನೌಶೆರಾಗೆ ಸ್ಥಳಾಂತರ ಮಾಡಲಾಯಿತು. ಮತ್ತೊಂದು ಶಾಲೆಯಲ್ಲಿ 55 ವಿದ್ಯಾರ್ಥಿಗಳು ಸಿಲುಕಿಹಾಕಿಕೊಂಡಿದ್ದರು. ಗುಂಡಿನ ಚಕಮಕಿಗಳ ನಡುವೆಯೂ ಎಲ್ಲಾ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಯಿತು. ಪ್ರಸ್ತುತ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದುವರೆದಿರುವ ಹಿನ್ನಲೆಯಲ್ಲಿ ನೌಶೆರಾ ಹಾಗೂ ಮಂಜಕೋಟೆ ಸೆಕ್ಟರ್ ಬಳಿಯಿರುವ ಶಾಲೆಗಳನ್ನು ಬಂದ್ ಮಾಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
Source : Kannada Prabha
loading...

Post a Comment

Powered by Blogger.