Veerakesari 17:55
ವಾಷಿಂಗ್ಟನ್‌: ಭಯೋತ್ಪಾದಕರಿಗೆ 'ಸುರಕ್ಷಿತ ನೆಲೆ'ಗಳನ್ನು ಒದಗಿಸುವ ದೇಶಗಳ ಪಟ್ಟಿಗೆ ಪಾಕಿಸ್ತಾನ ಸೇರ್ಪಡೆಯಾಗಿದೆ.
ಲಷ್ಕರೆ ತಯ್ಬಾ (ಎಲ್‌ಇಟಿ) ಮತ್ತು ಜೈಷೆ ಮೊಹಮ್ಮದ್‌ (ಜೆಇಎಂ) ನಂತಹ ಉಗ್ರ ಸಂಘಟನೆಗಳು ಪಾಕಿಸ್ತಾನದಲ್ಲಿ 2016ರಿಂದೀಚೆಗೆ ಬಹಿರಂಗವಾಗಿಯೇ ಕಾರ್ಯಾಚರಿಸುತ್ತಿದ್ದು, ಭಯೋತ್ಪಾದಕರ ನೇಮಕ, ತರಬೇತಿ ಹಾಗೂ ವಿಧ್ವಂಸಕ ಕೃತ್ಯಗಳಿಗೆ ನಿಧಿ ಸಂಗ್ರಹಣೆಯಂತಹ ಚಟುವಟಿಕೆಗಳಲ್ಲಿ ತೊಡಗಿವೆ.
'ಭಯೋತ್ಪಾದನೆ ಕುರಿತ ದೇಶಗಳ ವಾರ್ಷಿಕ ವರದಿ'ಯಲ್ಲಿ ವಿದೇಶಾಂಗ ಇಲಾಖೆ ಈ ವಿಷಯವನ್ನು ದೃಢೀಕರಿಸಿದ್ದು, ಪಾಕಿಸ್ತಾನದೊಳಗೆ ಭಯೋತ್ಪಾದಕ ಕೃತ್ಯಗಳನ್ನು ನಡೆಸಿದ 'ತೆಹ್ರೀಕ್‌ ಎ ತಾಲಿಬಾನ್ ಪಾಕಿಸ್ತಾನ್‌' ನಂತಹ ಸಂಘಟನೆಗಳ ವಿರುದ್ಧ ಪಾಕ್ ಮಿಲಿಟರಿ ಹಾಗೂ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ ಎಂದು ತಿಳಿಸಿದೆ.
'ಆದರೆ ಅಫ್ಘಾನ್ ತಾಲಿಬಾನ್ ಅಥವಾ ಹಕ್ಕಾನಿ ನೆಟ್‌ವರ್ಕ್‌ನಂತಹ ಅನ್ಯ ದೇಶಗಳಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಉಗ್ರ ಸಂಘಟನೆಗಳ ವಿರುದ್ಧ ಪಾಕ್‌ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಅವುಗಳನ್ನು ಪೋಷಿಸುತ್ತಿದೆ. ಅಫ್ಘಾನಿಸ್ತಾನದಲ್ಲಿ ಅಮೆರಿಕದ ಹಿತಾಸಕ್ತಿಗಳ ವಿರುದ್ಧ ಕಾರ್ಯಾಚರಿಸುವ ಉಗ್ರರ ನಿಗ್ರಹಕ್ಕೆ ಪಾಕ್‌ ನಿರ್ಲಕ್ಷ್ಯ ವಹಿಸಿದೆ' ಎಂದು ವಿದೇಶಾಂಗ ಇಲಾಖೆ ವರದಿ ತಿಳಿಸಿದೆ.
ಭಾರತ ಕೂಡ ಮಾವೋವಾದಿ ಉಗ್ರರು ಮತ್ತು ಪಾಕ್‌ ಮೂಲದ ಉಗ್ರರಿಂದ ಪದೇ ಪದೇ ದಾಳಿಗೆ ಗುರಿಯಾಗುತ್ತಿದೆ ಎಂದು ವರದಿ ಹೇಳಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆ ಕುರಿತ ಭಾರತದ ಆರೋಪ ನಿಜವಾಗಿದೆ ಎಂದು ಅಮೆರಿಕ ಹೇಳಿದೆ.
'ಜನವರಿಯಲ್ಲಿ ಭಾರತದ ಪಂಜಾಬ್‌ನ ಪಠಾಣ್‌ಕೋಟ್‌ ಸೇನಾ ನೆಲೆಯ ಮೇಲೆ ಜೈಷೆ ಮೊಹಮ್ಮದ್‌ ಉಗ್ರರು ದಾಳಿ ನಡೆಸಿದ್ದಾರೆ. 2016ರ ಬಳಿಕ ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಭಾರತ ಅಮೆರಿಕದೊಂದಿಗಿನ ಸಹಕಾರವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ' ಎಂದು ವಿದೇಶಾಂಗ ಇಲಾಖೆ ವರದಿ ಹೇಳಿದೆ.
ಐಸಿಸ್‌ನೊಂದಿಗೆ ಸಂಪರ್ಕ ಹೊಂದಿದ ಹಲವು ಉಗ್ರರನ್ನು ಭಾರತ ಬಂಧಿಸಿದ್ದು, ದೇಶದೊಳಗೆ ಐಸಿಸ್ ಜಾಲ ಬೆಳೆಯದಂತೆ ನಿಗಾವಹಿಸಿದೆ.
'ಪಾಕಿಸ್ತಾನ ಉಗ್ರರ ಸ್ವರ್ಗ' ಎಂಬ ಪ್ರತ್ಯೇಕ ಅಧ್ಯಾಯವನ್ನೇ ಈ ವರದಿ ಒಳಗೊಂಡಿದೆ. ಹಕ್ಕಾನಿ ನೆಟ್‌ವರ್ಕ್‌ (ಎಚ್‌ಕ್ಯುಎನ್‌), ಎಲ್‌ಇಟಿ ಮತ್ತು ಜೆಇಎಂ ಸೇರಿದಂತೆ ಹಲವು ಉಗ್ರ ಸಂಘಟನೆಗಳು 2016ರ ಬಳಿಕವೂ ಪಾಕಿಸ್ತಾನದೊಳಗೆ ಸುರಕ್ಷಿತ ನೆಲೆ ಕಂಡುಕೊಂಡಿವೆ.
'ಎಲ್‌ಇಟಿಯನ್ನು ಪಾಕಿಸ್ತಾನದೊಳಗೆ ನಿಷೇಧಿಸಿದ್ದರೂ, ಅದರ ಉಪ ಸಂಘಟನೆಗಳಾದ ಜಮಾತ್‌ ಉದ್‌ ದಾವಾ (ಜೆಯುಡಿ) ಮತ್ತು ಫಲಾಹ್‌ ಇ-ಇನ್ಸಾನಿಯತ್‌ ಫೌಂಡೇಶನ್‌ (ಎಫ್‌ಐಎಫ್‌) ಈಗಲೂ ಬಹಿರಂಗವಾಗಿಯೇ ಇಸ್ಲಾಮಾಬಾದ್‌ನಲ್ಲಿ ನಿಧಿ ಸಂಗ್ರಹಿಸುತ್ತಿವೆ' ಎಂದು ವರದಿ ಹೇಳಿದೆ.
'ಎಲ್ಇಟಿ ಮುಖ್ಯಸ್ಥ ಹಫೀಜ್‌ ಸಯೀದ್‌ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕನೆಂದು ವಿಶ್ವಸಂಸ್ಥೆ ಘೋಷಿಸಿದ್ದರೂ, ಈತ ಪಾಕಿಸ್ತಾನದಲ್ಲಿ ಅಲ್ಲಲ್ಲಿ ಬಹಿರಂಗ ರ‍್ಯಾಲಿಗಳನ್ನು ನಡೆಸುತ್ತಿದ್ದಾನೆ' ಎಂದು ಅಮೆರಿಕ ತಿಳಿಸಿದೆ.
Source - Vijaya Karnataka
loading...

Post a Comment

Powered by Blogger.