Veerakesari 22:09
loading...
​ಕಂಬಳದ ನಿಷೇಧಕ್ಕೆ ಕಾರಣರಾದ ಪ್ರಾಣಿ ದಯಾ ಸಂಘವು ಮೊದಲು ಅದರ ಮಹತ್ವ ತಿಳಿಯಲಿ !

ತುಳುನಾಡಿನ ಜನಪದ ಆಚರಣೆಗಳಲ್ಲಿ ಒಂದಾದ ಕಂಬಳ ಎಂದರೆ ಅದು ಬರೀ ಓಟದ ಸ್ಪರ್ಧೆ ಅಲ್ಲ. ಇದೊಂದು ಧಾರ್ಮಿಕ ಮತ್ತು ಫಲವಂತಿಕೆಯ ಆಚರಣೆಯೂ ಆಗಿದೆ. ಕ್ರಿ. ಶ. 1200ರಲ್ಲೇ ಆಳುಪ ರಾಣಿ ಬಲ್ಲಮಹಾದೇವಿಗೆ ಸಂಬಂಧಿಸಿದ ಶಾಸನದಲ್ಲಿ ಕಂಬಳದ ಬಗ್ಗೆ ಉಲ್ಲೇಖವಿರುವುದರಿಂದ ಇದರ ಪ್ರಾಚೀನತೆಯನ್ನು ಊಹಿಸಬಹುದು. ಭಾರತವೂ ಸೇರಿ ವಿಶ್ವಾದ್ಯಂತ ಹಲವಾರು ದೇಶಗಳಲ್ಲಿ ಹಲವಾರು ರೀತಿಯ ಪ್ರಾಣಿಗಳ ಓಟ ನಡೆಯುತ್ತದಾದರೂ ಕಂಬಳದಷ್ಟು ವ್ಯವಸ್ಥಿತವಾದ ಮತ್ತು ಮಹೋನ್ನತವಾದ ಪ್ರಾಣಿಗಳ ಓಟದ ಸ್ಪರ್ಧೆ ಮತ್ತೊಂದಿಲ್ಲ. ಕಂಬಳದ ಕಾಲದಲ್ಲಿ ತುಳುವರಿಗೆ ಕೋಣಗಳನ್ನು ಬಿಟ್ಟು ಬೇರೇನೂ ಕಾಣಿಸದು. ಇದಕ್ಕೆ ಕಾರಣ ಅವರಲ್ಲಿ ಕೋಣಗಳ ಬಗೆಗಿರುವ ಪ್ರೀತಿ, ಆಸಕ್ತಿ, ಶ್ರದ್ಧೆಗಳನ್ನೊಳಗೊಂಡ ಅವಿನಾಭಾವ ಸಂಬಂಧ. ತಮ್ಮ ಮೂಲವೃತ್ತಿಯಾದ ಕೃಷಿಗೆ ಆಧಾರವಾಗಿರುವ ಕೋಣಗಳ ಬಗೆಗಿರುವ ಗೌರವ. ಕಂಬಳದಲ್ಲಿ ಒಂದು ಹೊತ್ತು ನಡೆಯುವ ಓಟದಲ್ಲಿ ಹಿಂಸೆ ಆಗುತ್ತದೆ ಎಂದು ಬೊಬ್ಬಿಡುವ ಪ್ರಾಣಿ ದಯಾ ಸಂಘಕ್ಕೆ ಉಳಿದ ದಿನಗಳಲ್ಲಿ ಕೋಣಗಳಿಗೆ ಕೊಡುವ ರಾಜಮರ್ಯಾದೆ ತಿಳಿದಿರಲಿಕ್ಕಿಲ್ಲ.!

ತುಳು ಜನರ ಮೂಲ ವೃತ್ತಿ ಕೃಷಿ. ಈಗೇನೋ ಬದಲಾದ ಕಾಲಮಾನದಲ್ಲಿ ದುಡಿಮೆಗೆ ನೂರಾರು ಮಾರ್ಗಗಳು ಗೋಚರಿಸುತ್ತಾ ಕೃಷಿಯ ಪ್ರಾಮುಖ್ಯ ಕಡಿಮೆಯಾಗಿದ್ದರೂ ಈ ಜನ ಅನಾದಿ ಕಾಲದಿಂದಲೂ ಕೃಷಿಯನ್ನೇ ನಂಬಿ ಬದುಕಿದವರು. ಕೃಷಿಗೆ ಶಕ್ತಿ ಮೂಲವಾಗಿ ಉಪಯೋಗಿಸುವ ಪ್ರಾಣಿ ಕೋಣ! ಅಂದರೆ ಕೋಣಗಳು ಕೃಷಿಕರ ಜೀವನಾಧಾರ. ಹಾಗಾಗಿ ಇಲ್ಲಿನ ಜನರು ಕೋಣಗಳನ್ನು ಅಪಾರವಾಗಿ ಪ್ರೀತಿಸುತ್ತಾರೆ, ಪೂಜಿಸುತ್ತಾರೆ. ಇವರ ಕೋಣಗಳ ಮಲಿನ ಪ್ರೀತಿಯನ್ನು ನೋಡಿದರೆ ಕೋಣವನ್ನೇ ಪ್ರಧಾನ ದೇವರಾಗಿ (Buffalo God) ಪೂಜಿಸುವ ನೀಲಗಿರಿಯ ತೋಡರು ನೆನಪಿಗೆ ಬರುತ್ತಾರೆ.

ಕಂಬಳ ಒಂದು ಸ್ಪರ್ಧೆಯಾಗಿ ಮಹತ್ವ ಪಡೆದಿರುವ ಈ ಕಾಲಘಟ್ಟದಲ್ಲಿ ‘ಕಂಬಳದ ಕೋಣಗಳ ಮಾಲಕತ್ವ’ ಎಂಬುದೇ ಒಂದು ಪ್ರತಿಷ್ಠೆಯ ವಿಷಯವಾಗಿದೆ. ಸ್ಪರ್ಧೆ ಗೆಲ್ಲಬಲ್ಲಂತಹ ಶಕ್ತಿಶಾಲೀ ಕೋಣಗಳು ಕೆಲ ಮನೆತನಗಳ ಪ್ರತಿಷ್ಠೆಯನ್ನೇ ಹೆಚ್ಚಿಸುವುದರಿಂದ ಇಲ್ಲಿನ ಹಣವಂತರು ಕೋಣಗಳ ಮೇಲೆ ಲಕ್ಷಾಂತರ ರೂಪಾಯಿಗಳನ್ನು ಹೂಡುತ್ತಾರೆ. ಅದು ಸರಿ, ಆದರೆ ಕೋಣದಂತಹ ಜೀವಿಯನ್ನು ಸಾಕಲು ಲಕ್ಷಾಂತರ ರೂಪಾಯಿ ಏಕೆ ಖರ್ಚಾಗುತ್ತದೆ? ಏಕೆ ಖರ್ಚಾಗುತ್ತದೆಂದು ತಿಳಿಯಬೇಕಾದರೆ ಕೋಣ ಸಾಕಣೆಯ ಕ್ರಮವನ್ನು ನೋಡಬೇಕು.

ಮೊದಲೆಲ್ಲಾ ಕೃಷಿಕಾರ್ಯದಲ್ಲಿ ಉಪಯೋಗವಾಗುತ್ತಿದ್ದ ಮಾಮೂಲಿ ಕೋಣಗಳೇ ಕಂಬಳದಲ್ಲಿ ಓಡುತ್ತಿದ್ದವು. ಆದರೆ ಈಗ ಕಂಬಳಕ್ಕೆಂದೇ ಬೇರೆ ಕೋಣಗಳನ್ನು ಜತನದಿಂದ, ಶ್ರದ್ಧೆಯಿಂದ ಸಾಕುತ್ತಾರೆ ಅವುಗಳಿಗೆ ಓಡುವುದನ್ನು ಬಿಟ್ಟು ಬೇರೇನೂ ಕೆಲಸವಿಲ್ಲ.

ಕಂಬಳಕ್ಕೆಂದು ಒಳ್ಳೆಯ ಗುಣಲಕ್ಷಣಗಳಿರುವ ಕೋಣದ ಮರಿಯನ್ನು ಶಾಸ್ತ್ರ ರೀತ್ಯಾ ಆರಿಸಿಕೊಳ್ಳುತ್ತಾರೆ. ಹಾಗೆ ಆರಿಸಿಕೊಳ್ಳುವಾಗಲೂ ಅನುಸರಿಸಬೇಕಾದ ನಿರ್ದಿಷ್ಟ ನಿಯಮಗಳಿವೆ. ಕಂಬಳದ ದೃಷ್ಟಿಯಿಂದ ಮರಿಗಳನ್ನು ಆರಿಸುವಾಗ ಅವುಗಳ ಕಾಲಿನ ದಪ್ಪ, ತಲೆಯ ದಪ್ಪ, ಬಾಲದ ಕೂದಲಿನ ಉದ್ದ ಇವೆಲ್ಲವನ್ನೂ ಗಮನಿಸಲಾಗುತ್ತದೆ. ಓಡುವಾಗ ಎಡಭಾಗಕ್ಕೆ ಯಾವುದು ಬರಬೇಕು, ಬಲಭಾಗಕ್ಕೆ ಯಾವುದು ಬರಬೇಕು ಎಂಬುದನ್ನೂ ಗಮನಿಸಿಯೇ ಜೋಡಿಯನ್ನು ನಿರ್ಧರಿಸಲಾಗುತ್ತದೆ.

ಅವು ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಓಟಕ್ಕೆ ತಯಾರಿ ಆರಂಭವಾಗುತ್ತದೆ. ಅವು ದಷ್ಟಪುಷ್ಟವಾಗಿ ಬೆಳೆದು ಅವುಗಳ ದೇಹದಲ್ಲಿ ಹೆಚ್ಚಿನ ಶಕ್ತಿ ಸಂಚಯವಾಗಬೇಕಾಗಿರುವುದರಿಂದ ಅವುಗಳ ಆಹಾರದ ವ್ಯವಸ್ಥೆಯೂ ಬೇರೆಯೇ ಆಗಿರುತ್ತದೆ. ಕೋಣಗಳ ಊಟದ ‘ಮೆನು’ ನೋಡಿದರೆ ನಾವೆಲ್ಲಾ ಬೆರಗಾಗಬೇಕಾಗುತ್ತದೆ. ಮಾಮೂಲಿನಂತೆ ಒಣ ಹುಲ್ಲು ಹೇಗೂ ಇರುತ್ತದೆ. (ಹಸಿರು ಹುಲ್ಲನ್ನು ಹೆಚ್ಚಾಗಿ ಹಾಕುವುದಿಲ್ಲ) ಅದರ ಜೊತೆಗೆ ಬೆಳೆದ ಕೋಣಗಳಿಗೆ ಪ್ರತಿದಿನ ನಾಲ್ಕು ಅಥವಾ ಐದು ಕೆ.ಜಿ. ಹುರುಳಿಕಾಳನ್ನು ನೆನೆಸಿ ತಿನ್ನಿಸುತ್ತಾರೆ. ಹಸೀ ಹುಲ್ಲಿನ ಬದಲಾಗಿ ತೆಂಗಿನ ಕಾಯಿ, ತೆಂಗಿನ ಹಿಂಡಿ, ಹಸೀ ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನಿಸಲಾಗುತ್ತದೆ. ಅದರ ಜೊತೆಗೆ ಎರಡು ಕುಡ್ತೆ ತೆಂಗಿನ ಎಣ್ಣೆಯನ್ನೂ ಕುಡಿಸಲಾಗುತ್ತದೆ. ದೇಹದ ಉಷ್ಣತೆ ಏರಿದರೆ ಅದನ್ನು ಶಮನಗೊಳಿಸಲು ಉದ್ದನ್ನು ನೆನೆಸಿ ರುಬ್ಬಿ ರಸ ತೆಗೆದು ಕುಡಿಸಲಾಗುತ್ತದೆ. ಕೆಲವರಂತೂ ಕೋಣಗಳ ದೇಹದ ಉಷ್ಣತೆ ನಿವಾರಿಸಲು ಎಳನೀರು ಕುಡಿಸುತ್ತಾರೆ. ಅದರ ಜೊತೆಗೆ ಬಕೆಟ್ಗಟ್ಟಲೆ ಹಣ್ಣಿನ ರಸವೂ ಇರುತ್ತದೆ!. ಬೇಸಿಗೆ ಬಿಸಿಯಿಂದ ರಕ್ಷಣೆ ನೀಡಲು ಕೊಟ್ಟಿಗೆಯಲ್ಲಿ ಫ಼್ಯಾನ್ ಇರುವುದೂ ಉಂಟು!. ಹಾಗೇ ಛಳಿಗಾಲದಲ್ಲಿ ಶೀತಗಾಳಿಯಿಂದ ಕೋಣಗಳನ್ನು ರಕ್ಷಿಸಲು ಕೊಟ್ಟಿಗೆಯ ಒಳಾವರಣವನ್ನು ಕೃತಕವಾಗಿ ಬಿಸಿಮಾಡಿಡುವುದೂ ಉಂಟು!! ಪ್ರತಿ ದಿನ ಅವುಗಳ ಮೈಗೆ ಎಣ್ಣೆ ಹಚ್ಚಿ ಮಾಲೀಶ್ ಮಾಡಲಾಗುತ್ತದೆ. ನಂತರ ಬಿಸಿನೀರಿನಲ್ಲಿ ಸ್ನಾನ. ದೇಹದ ಮಾಂಸಖಂಡಗಳು ದೃಢವಾಗಿರಲು ಆಗಾಗ ಕೆರೆಗಳಲ್ಲಿ ಈಜಾಟದ ಮೋಜೂ ಇರುತ್ತದೆ. ಇದನ್ನೆಲ್ಲಾ ನೋಡಿಕೊಳ್ಳಲು ನಾಲ್ಕಾರು ಜನರಾದರೂ ಬೇಕು!

ಇಷ್ಟು ಸುವ್ಯವಸ್ಥಿತವಾಗಿ, ಸಾಂಪ್ರದಾಯಿಕವಾಗಿ ಆಚರಿಸೋ ಕಂಬಳ ನಿಷೇಧಿಸಲ್ಪಟ್ಟಿರೋದು ದುರ್ದೈವ ಮತ್ತು ಆಶ್ಚರ್ಯಕರ! ತುಳು ಆಚರಣೆಗಳಿಗೆ, ಸಂಸ್ಕೃತಿಗೆ ಪ್ರೋತ್ಸಾಹ ಕೊಡಲು ಮತ್ತು ಬೆಳೆಸಲು ಸ್ವಂತ ಸರ್ಕಾರ ಅರ್ಥಾತ್ ತನ್ನದೇ ಆದ ಸ್ವಂತ ರಾಜ್ಯ ಇಲ್ಲದ ತುಳುನಾಡಿಗೆ ಇದು ನುಂಗಲಾರದ ತುತ್ತು.! ಕಂಬಳದ ಮೇಲೆ ಪ್ರಾಣಿ ದಯಾ ಸಂಘಕ್ಕೆ ಇರುವ ಕೋಪ ಗೋ ಹತ್ಯೆ ಮಾಡುವವರ ಮೇಲೆ ಯಾಕಿಲ್ಲ ಅನ್ನೋದು ಮತ್ತೊಂದು ಆಶ್ಚರ್ಯ! ಈ ಬಗ್ಗೆ ತುಳುವರೂ ಸ್ವಲ್ಪ ಯೋಚಿಸಿ ನಮ್ಮ ಮೇಲಾಗುತ್ತಿರುವ ದೌರ್ಜನ್ಯಕ್ಕೆ ತಿರುಗೇಟು ಕೊಡಲು ತಯಾರಾಗಬೇಕಾದ ಅನಿವಾರ್ಯತೆ ಇದೆ. ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿ, ಕಂಬಳದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿ, ಕಂಬಳ ಆಚರಿಸಲು ಮತ್ತೆ ತಯಾರಾಗಲಿ. ಕಂಬಳ ತುಳುನಾಡಿನೆಲ್ಲೆಡೆ ಮತ್ತೆ ವಿಜ್ರಂಭಿಸಲಿ. ತುಳುನಾಡಿಗೆ ಜಯವಾಗಲಿ.

#ಕಂಬಳ_ಪ್ರೇಮಿ
loading...

Post a Comment

Powered by Blogger.