Veerakesari 04:08
loading...
ಮನುಷ್ಯರಲ್ಲಿ ಗುರು ಶ್ರೇಷ್ಠ ಜೀವಗಳಲ್ಲಿ ಗೋವು ಶ್ರೇಷ್ಠ. ಜೀವಗಳಲ್ಲೇನು? ದೇವರುಗಳಲ್ಲೂ ಗೋವು ಶ್ರೇಷ್ಠ ಎಂದು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು, ಶ್ರೀಸಂಸ್ಥಾನ- ಗೋಕರ್ಣ, ಶ್ರೀರಾಮಚಂದ್ರಾಪುರಮಠ, ಹೊಸನಗರ ಇವರು ಅಭಿಪ್ರಾಯಪಟ್ಟರು. ಶ್ರೀರಾಮಚಂದ್ರಾಪುರಮಠದ ನೇತೃತ್ವದಲ್ಲಿ ನೆಡೆಯುತ್ತಿರುವ ಮಂಗಲಗೋಯಾತ್ರೆಯ ಅಂಗವಾಗಿ ಕುಮಟಾದ ಮಣಕಿ ಮೈದಾನದ ವೇದಿಕೆಯಲ್ಲಿ ನೆಡೆದ ಸುರಭಿ ಸಂತ ಸಂಗಮ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ರಾಘವೇಶ್ವರ ಶ್ರೀಗಳು, ಗೋವಿಗೆ ಸಮಾನವಾಗಿರುವ ಜೀವ ಇನ್ನೊಂದಿಲ್ಲ. ಕುಮಟಾದ ಶೋಭಾಯಾತ್ರೆ ನೋಡಿದ ಮೇಲೆ ಗೋವನ್ನು ಕೇಳುವರಿಲ್ಲ ಎಂಬ ಕಾಲ ಮುಗಿಯಿತು ಎಂದನಿಸಿದೆ. ಇಡೀ ಸಭೆಯ ಮೌನದ ಉಪಸ್ಥಿತಿಯ ಅರ್ಥವೆಂದರೆ ಗೋವಿನ ಜೊತೆಗೆ ನಾವಿದ್ದೇವೆ ಎನ್ನುವ ಮೌನಸಂದೇಶ ರವಾನೆ. ಹಾಗಾಗಿ ನಿಮ್ಮ ನಮ್ಮೆಲ್ಲರ ಆಶಯದಂತೆ ಗೋವುಗಳು ಉಳಿದರೆ ದೇಶಕ್ಕೆ ಸ್ವಾತಂತ್ರ್ಯಕ್ಕಿಂತ ಮಿಗಿಲಾದ ಕೊಡುಗೆ ನೀಡಿದಂತೆ ಎಂದರು.
ಕುಂಭಪುರ ಇಂದಿನಿಂದ ಪೂರ್ಣಕುಂಭಪುರವಾಯಿತು. ಆ ಪೂರ್ಣಕುಂಭಗಳಲ್ಲಿ ಗೋಭಕ್ತಿ ತುಂಬಿದೆ. ಸಭಾಮಂಡಲದಲ್ಲಿ ಗೋಭಕ್ತರು ತುಂಬಿದ್ದಾರೆ. ಗೋವಿಗಾಗಿ ದುಡಿದರೆ ಬದುಕು ಸಾರ್ಥಕ. ಗೋವಿಗಾಗಿ ಮಡಿದರೆ ಆ ಸಾವು ಸಾರ್ಥಕ ಎಂದರು. ಗೋಹತ್ಯೆಯ ಬೇರಿರುವುದೇ ರೈತನ ಮನೆಯಲ್ಲಿ ಗೋಹತ್ಯೆಯ ಬೀಜ ರೈತ ಮಾರುವ ಮೂಲಕವೇ ಮೊಳಕೆಯೊಡುತ್ತದೆ. ಹಾಗಾಗಿ ಗೋಹತ್ಯೆಯ ಬೇರಿರುವುದು ರೈತನ ಮನೆಯಲ್ಲಿಯೇ. ಗೋಬ್ಯಾಂಕ್ ಮೂಲಕ ಗೋವುಗಳನ್ನು ಸಾಲವಾಗಿ ನೀಡುವ, ರೈತನ ಕಷ್ಟಕಾಲದಲ್ಲಿ ಗೋವನ್ನು ಸಾಕುವ ಕಾರ್ಯವಾದರೆ, ಗವ್ಯ ಯೂನಿಟ್ ನ ಮೂಲಕ ಗೋಮೂತ್ರ, ಗೋಮಯಗಳಿಗೆ ಸರಿಯಾದ ಬೆಲೆ ನೀಡಿ ಕೊಂಡುಕೊಳ್ಳುವ ಆಯೋಜನೆಯನ್ನು ಮಾಡಿ ರೈತ ಗೋವುಗಳನ್ನು ಕಸಾಯಿಖಾನೆಗೆ ನೀಡುವುದನ್ನು ಗೋಯಾತ್ರೆ ತಪ್ಪಿಸಲಿದೆ. ಇದಕ್ಕಾಗಿ ನಿಮ್ಮ ಸಹಕಾರವಷ್ಟೇ ಬೇಕಿದೆ ಎಂದರು.
ಗೋವಿಗೂ ಮೇವಿಗೂ ಯಾರೂ ಮಧ್ಯ ಬರಬಾರದು ಮಲೆಮಾದೇಶ್ವರ ಬೆಟ್ಟದಂತೆ ಹಲವು ಬೆಟ್ಟಗಳಿಗೆ ಕಾನೂನಿನ ನೆಪವೊಡ್ಡಿ ಬೇಲಿಗಳನ್ನು ಹಾಕಿ ಗೋವುಗಳು ಮೇಯದಂತೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಗೋವಿಗೆ ಮೇವಿಲ್ಲದಂತಾಗಬಾರದು. ಇದಕ್ಕಾಗಿ ಸರ್ಕಾರಗಳು ಬೇಲಿ ತೆಗೆಸಿ ಗೋವಿಗೆ ಮೇಯಲು ಅವಕಾಶ ನೀಡಬೇಕು. ಗೋವಿಗೂ ಮೇವಿಗೂ ಮಧ್ಯೆ ಯಾರೂ ಬರಬಾರದು ಎಂದು ಆಗ್ರಹಿಸಿದರು.
ಭೂಪಾಲ ಗೋಪಾಲನಾದ ನಿದರ್ಶನಗಳು ದಿಲೀಪನಂತಹ ಮಹಾರಾಜನಲ್ಲಿದೆ. ಇಂದಿನ ಆಳುವವರೂ ಗೋವಿನ ಮಹತಿಯನ್ನರಿತು ಗೋಹತ್ಯೆಯನ್ನು ನಿಷೇಧ ಮಾಡಲೇಬೇಕಿದೆ. ದೇಶಕ್ಕೆ ಹೊರಗಿನ ಆಕ್ರಮಣದಿಂದ ಕಾಪಾಡಲು ಭೂಸೇನೆಯಿದ್ದರೆ ಒಳಗಿನ ಆಕ್ರಮಣಗಳನ್ನು ತಡೆಯಲು ಗೋಸೇನೆಯ ಅವಶ್ಯಕತೆಯಿದೆ. ಸರ್ಕಾರದ ಸಹಕಾರದ ಹೊರತಾಗಿಯೂ ನಾವೆಲ್ಲರೂ ಕೂಡಿ ಗೋರಕ್ತಮುಕ್ತ ಭಾರತ ಕಟ್ಟೋಣ ಎಂದು ಗೋಸಂದೇಶ ನೀಡಿದರು.
ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮಿಗಳು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಾತೆಯ ಸ್ಥಾನವನ್ನು ಬೇರೆ ಯಾವುದೇ ಜೀವಿಗೆ ನೀಡಿದ ಉದಾಹರಣೆಯಿಲ್ಲ. ಎಲ್ಲಾ ಧರ್ಮಗಳಲ್ಲೂ ಗೋಮಾತೆಗೆ ಪ್ರಾಮುಖ್ಯತೆ ನೀಡಲಾಗಿದೆ. ಜೈನ ಧರ್ಮದಲ್ಲೂ ಗೋವು ತನ್ನ ಕರುವಿಗೆ ನೀಡುವ ಪ್ರೀತಿಯಂತೆ ನಾವು ಇನ್ನೊಬ್ಬರನ್ನು ಕಾಣಬೇಕು ಎಂಬ ಮಾತುಗಳು ಬರುತ್ತದೆ. ನೋಟ್ ಬ್ಯಾನ್ ಮಾಡಿದಂತೆ ಪ್ಲಾಸ್ಟಿಕ್ ನಿಷೇಧವೂ ಮಾಡಿದರೆ ಗೋಸಂರಕ್ಷಣೆಗೆ ಅಮೃತಪಥದ ನಿರ್ಮಾಣ ಸಾಧ್ಯವಾಗುತ್ತದೆ. ಗೋರಕ್ಷಣೆಗೂ ಕಾನೂನು ಬರಬೇಕಾದ ಅವಶ್ಯಕತೆ ಇಂದಿದೆ. ಈ ದಿಸೆಯಲ್ಲಿ ಕಾರ್ಯವೆಸಗುತ್ತಿರುವ ರಾಘವೇಶ್ವರ ಶ್ರೀಗಳ ಜೊತೆ ನಮ್ಮೆಲ್ಲರ ಸಹಕಾರವಿದೆ ಎಂದರು.
ಷ.ಬ್ರ. ಜಡೆಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಗೋಹತ್ಯೆಯನ್ನು ನಿಮಿತ್ತವಾಗಿಸಿ ನೆಡೆದ ಯಾವುದಾದರೂ ಕುಂಭಮೇಳ ಇದ್ದರೆ ಅದು ಮಂಗಲಗೋಯಾತ್ರೆ. ಕನಿಷ್ಟ ಒಂದು ಗೋವನ್ನಾದರೂ ಮನೆಯಲ್ಲಿ ಸಾಕುವ ಸಂಕಲ್ಪ ನಾವೆಲ್ಲರೂ ಮಾಡಿದರೆ ಗೋಯಾತ್ರೆಯ ಆಶಯ ಸಫಲವಾದಂತೆ. ಆಕಳ ಮೊಸರು, ತುಪ್ಪ ಎಲ್ಲವೂ ಪೂಜ್ಯವಾಗಿದೆ. ಆಕಳ ಕಿವಿಯ ಆಕಾರದಲ್ಲಿರುವ ಆತ್ಮಲಿಂಗವಿರುವ ಗೋಕರ್ಣ ರಾಘವೇಶ್ವರ ಶ್ರೀಗಳ ಸಂಸ್ಥಾನವಾಗಿರುವುದು ಗೋವಿಗೂ ಶ್ರೀಗಳಿಗೂ ಇರುವ ನಂಟನ್ನು ಸೂಚಿಸುತ್ತದೆ. ಗೋವಿಗಾಗಿ ಕಾರ್ಯವೆಸಗುತ್ತಿರುವ ರಾಮಚಂದ್ರಾಪುರಮಠದ ರಾಘವೇಶ್ವರ ಶ್ರೀಗಳು ಕಲಿಯುಗದ ಶ್ರೀರಾಮಚಂದ್ರನಂತೆ ಎಂದರು.
ಕಾರ್ಯಕ್ರಮದಲ್ಲಿ ಮಂಗಲಗೋಯಾತ್ರೆ ಅಂಗವಾಗಿ ಕುಮಟಾದ ಅನೇಕ ಸ್ಥಳಗಳಲ್ಲಿ ನೆಡೆಸಲಾಗಿದ್ದ ಗೋವು ಮತ್ತು ನಾವು ಎಂಬ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿವಿಧ ಶಾಲೆಯ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಹಾಗೆಯೇ ಗೋಸೇವಕರಾದ ಎಸ್.ಎಮ್.ನಾಯಕ್ ಹಳದೀಪುರ, ಜಗನ್ನಾಥ್ ಪಾಂಡುರಂಗ ಆಚಾರಿ, ಲೋಹಿತ್ ಅರೆಯಂಗಡಿಯವರನ್ನು ಸಭೆಯಲ್ಲಿ ಗುರುತಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಸಂತವರೇಣ್ಯರಿಗೆ ಹಾಗೂ ಗೋಮಾತೆಗೆ ಸಾವಿರದಾರತಿಯನ್ನೂ ಪಂಚಸಹಸ್ರ ಮೀರಿದ ಗೋಭಕ್ತಾದಿಗಳು ಮಾಡಿದರು.ಕುಮಟಾದಲ್ಲಿ ಅಮೋಘ ಶೋಭಾಯಾತ್ರೆ ಗೋವರ್ಧನಧಾರಿ ಗೋಪಾಲ, ನಂದಗೋಪನ ಕಂದನೊಡನೆ ಸಂಗಡಿಗರು, ಗೋಯಾತ್ರೆಯ ಚೈತನ್ಯ ಮೂರ್ತಿಯಾದ ಮಂಗಲಪಾಂಡೆಯ ಸ್ತಬ್ಧ ಚಿತ್ರಗಳು ಮಂಗಲಗೋಯಾತ್ರೆಯ ಅಗ್ರರಥದ ಹಿಂದಿರುವ ದಿಗ್ಗಜರ ಸ್ಪೂರ್ತಿಗಳನ್ನು ನೆನಪಿಸಿದರೆ, ಪ್ರಗತಿ ವಿದ್ಯಾಲಯ ಹಾಗೂ ಕೊಂಕಣ ಶಿಕ್ಷಣ ವಿದ್ಯಾಲಯದ ವಿದ್ಯಾರ್ಥಿಗಳು ಶೋಭಾಯಾತ್ರೆಯೊಡನೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಮಂಗಲವಾದ್ಯಗಳೊಡನೆ ಸುಮಂಗಲಿಯರ ಪೂರ್ಣಕುಂಭ ಸ್ವಾಗತ, ಮೂರು ಸಾವಿರ ಮೀರಿದ ಗೋಭಕ್ತರು ನಗರದಾದ್ಯಂತ ನೆಡೆದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಗೋಜಾಗೃತಿ ಪಸರಿಸಿದರು. ಈ ಸಂದರ್ಭದಲ್ಲಿ ಪೂಜ್ಯರಾದ ಗಂಗಾಧರಯ್ಯ ಸ್ವಾಮಿಗಳು, ಮಹಂತೇಶ ಸ್ವಾಮಿಗಳು, ದಿವ್ಯಾನಂದ ಸ್ವಾಮಿಗಳು, ರಾಮಾನಂದ ಅವಧೂತರು ಹಾಗೂ ಗೋಪ್ರೇಮಿಗಣ್ಯರಾದ ಶಾಸಕರು, ಪುರಸಭಾ ಅಧ್ಯಕ್ಷರು ಹಾಗೂ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಜರಿದ್ದರು.


loading...

Post a Comment

Powered by Blogger.