veerakesari.in
ಕಳೆದ ಫೆ.21 ರಂದು ಬಳ್ಳಾರಿ ಜಿಲ್ಲೆ ಹುಬ್ಬಳ್ಳಿ ತಾಲೂಕು ಕೊಟ್ಟೂರು ಜಾತ್ರಾ ಮಹೋತ್ಸವದಲ್ಲಿ ಭಾರೀ ಪ್ರಮಾಣದ ರಥ ಮಗುಚಿ ಬಿದ್ದರೂ ಯಾವುದೇ ಪ್ರಾಣಾಪಾಯ ಸಂಭವಿಸದಿರುವುದಕ್ಕೆ ಕಾಮಧೇನುವೊಂದು ಕಾರಣವೇ? ಹಾಗೆಂದು ಅಲ್ಲಿನ ಭಕ್ತ ಸಮೂಹ ಮಾತನಾಡಿಕೊಳ್ಳುತ್ತಿದೆ. ಸುಮಾರು 60 ಅಡಿ ಎತ್ತರದ ಭಾರೀ ಗಾತ್ರದ ರಥ ಎಳೆಯುವ ಸಂದರ್ಭದಲ್ಲಿ ಪಕ್ಕಕ್ಕೆ ವಾಲಿ ಉರುಳಿಬಿತ್ತಾದರೂ ಸಹಸ್ರಾರು ಭಕ್ತರಿದ್ದರೂ ಯಾವುದೇ ಪ್ರಾಣಾಪಾಯವಾಗಲಿ, ಗಾಯಗಳಾಗಲಿ, ಕಾಲ್ತುಳಿತವಾಗಲಿ ಸಂಭವಿಸಿಲ್ಲ. ಇದಕ್ಕೆ ಕಾರಣ ಆ ಊರಿನ ಬಸವ. ರಥ ಬೀಳುವ ಐದು ನಿಮಿಷಗಳ ಮುಂಚೆ ಏಕಾಏಕಿ ನುಗ್ಗಿದ ಬಸವ ಅಲ್ಲಿನ ಭಕ್ತರನ್ನು ಅಲ್ಲಿಂದ ಜಾಗ ಖಾಲಿ ಮಾಡಿಸಿದ್ದ ಎಂದು ಹೇಳಲಾಗುತ್ತಿದೆ.
ಲಕ್ಷಾಂತರ ಜನ ಸೇರುವ ಈ ಜಾತ್ರೆಯಲ್ಲಿ ಕೊಟ್ಟೂರೇಶ್ವರನ ರಥವನ್ನು ಎಳೆಯಲಾಗುತ್ತದೆ. ಒಮ್ಮೆಲೆ ಸಾವಿರಾರು ಜನ ಸೇರಿ ರಥವನ್ನು ಎಳೆಯುತ್ತಿರುತ್ತಾರೆ. ಈ ಸಂದರ್ಭದಲ್ಲಿ ಅದೆಲ್ಲಿತ್ತೋ ಏನೋ ಬಸವವೊಂದು ಬಂದು ರಥ ಬೀಳುವ ಭಾಗದಲ್ಲಿ ಅಡ್ಡಾದಿಡ್ಡಿ ನುಗ್ಗಿ ಓಡಾಡಿದೆ. ಆಗ ಭಕ್ತರು ಚೆಲ್ಲಾಪಿಲ್ಲಿಯಾಗಿದ್ದಾರೆ. ಇದಾದ ಎರಡು ನಿಮಿಷಗಳ ನಂತರ ರಥ ಉರುಳಿಬಿದ್ದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಯಾರಿಗೂ ಏನೂ ಆಗಿಲ್ಲ. ಇದು ಪವಾಡವೋ, ಕಾಕತಾಳಿಯವೋ, ದೇವರ ಕೃಪೆಯೋ ಅಥವಾ ದೇವರ ರೂಪದಲ್ಲಿ ಬಸವನೇ ಬಂದು ಭಕ್ತರನ್ನು ಕಾಪಾಡಿದನೋ. ಒಟ್ಟಿನಲ್ಲಿ ಆಗಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಲು ಈ ಬಸವ ಕಾರಣವಾಗಿರುವುದಕ್ಕೆ ಕೊಟ್ಟೂರಿನಲ್ಲೀಗ ಬಸವನ ಆರಾಧನೆ ನಡೆಯುತ್ತಿದೆ.
ಈ ಬಸವ ಇಲ್ಲದಿದ್ದರೆ ಅಂದು ಏನಾಗುತ್ತಿತ್ತೋ ಏನೋ ಊಹಿಸಿಕೊಳ್ಳಲು ಸಾಧ್ಯವೇ ಆಗುತ್ತಿರಲಿಲ್ಲ. 60 ಅಡಿ ಎತ್ತರದ ಭಾರೀ ಗಾತ್ರದ ರಥ ಅಚ್ಚು ಮುರಿದು ಬಿದ್ದ ಪರಿಣಾಮಕ್ಕೆ ಅದೆಷ್ಟು ಮಂದಿ ಸಾಯಬೇಕಾಗಿತ್ತು. ಗಾಬರಿಯಿಂದ ಕಾಲ್ತುಳಿತದಿಂದ ಮತ್ತಷ್ಟು ಅನಾಹುತ ಸಂಭವಿಸಬೇಕಿತ್ತು. ಆದರೆ ಈ ಬಸವ ನೀಡಿದ ಮುನ್ಸೂಚನೆಯಿಂದ ದುರಂತ ತಪ್ಪಿದಂತಾಗಿದೆ.
loading...
Post a Comment