Veerakesari 21:55
veerakesari.in
​ಆಕೆಯ ಹೆಸರು ವಿಸ್ಮಯ. ಬದುಕನ್ನು ವಿಸ್ಮಯದ ಕಣ್ಣಲ್ಲೇ ನೋಡುವ ಆಕೆಯ ಜೀವನ ಪ್ರೀತಿಯನ್ನು ಕಂಡೇ ಆಕೆಗೆ ಆ ಹೆಸರನ್ನಿಟ್ಟಿದ್ದಿರಬೇಕು. ಜನವರಿ 18 ರಂದು ಕೇರಳದ ಕಣ್ಣೂರಿನಲ್ಲಿ ಹತ್ಯೆಯಾದ ಸಂತೋಷ್ ಕುಮಾರ್ ಎಂಬ ಆರ್ ಎಸ್ ಎಸ್ ಅನುಯಾಯಿಯ ಮಗಳು ಈಕೆ.
ಪುಟ್ಟ ಕೈಗಳಲ್ಲಿ ಒಂದಷ್ಟು ಪ್ಲೆಕಾರ್ಡ್ ಹಿಡಿದು ನಿಂತಿರುವ ಈಕೆಯ ಚಿತ್ರವನ್ನು ಕಂಡರೆ ತಕ್ಷಣವೇ ಗುರ್ಮೆಹರ್ ಕೌರ್ ನೆನಪಾಗಬಹುದು. ಆದರೆ ಈಕೆಯ ಪ್ರಶ್ನೆಗೂ ಗುರ್ಮೆಹರ್ ಳ "ತನ್ನಪ್ಪನನ್ನು ಸಾಯಿಸಿದ್ದು ಪಾಕಿಸ್ಥಾನವಲ್ಲ, ಯುದ್ಧ" ಎನ್ನುವ ಹೇಳಿಕೆಗೂ ಹೋಲಿಸಲೂ ಆಗದಷ್ಟು ಅಂತರವಿದೆ.
ಆಕೆ ಹಿಡಿದ ಒಂದೊಂದು ಪ್ಲೆಕಾರ್ಡಿನಲ್ಲಿ ಬರೆದಿರುವ ಸಾಲಿನಲ್ಲಿ ಒಡಮೂಡಿದ ಭಾವಕ್ಕೆ ಸಾಂತ್ವನ ಹೇಳುವ ಚೈತನ್ಯ ಬಹುಶಃ ಯಾರಲ್ಲೂ ಇಲ್ಲ.
ಆಕೆ ಬರೆಯುತ್ತಾಳೆ...
ನಾನು ವಿಸ್ಮಯ. 8ನೇ ತರಗತಿ ಓದುತ್ತಿರುವ 12 ವರ್ಷದ ಹುಡುಗಿ. ಐಪಿ ಎಸ್ ಅಧಿಕಾರಿಯಾಗಿ ನನ್ನ ಬಡ ಊರನಲ್ಲಿ ಸೇವೆ ಸಲ್ಲಿಸೋದು ನನ್ನ ಕನಸು. ನನ್ನ ಕನಸನ್ನು ನನಸಾಗಿಸುವುದು ನನ್ನಪ್ಪನ ಕನಸಾಗಿತ್ತು. ಆದರೆ ಬಹುಶಃ ನನ್ನ ತಂದೆ ಮಾಡಿದ ಒಂದೇ ತಪ್ಪೆಂದರೆ ಅವರು ಆರ್ ಎಸ್ ಎಸ್ ಮತ್ತು ಬಿಜೆಪಿ ಗೆ ಬೆಂಬಲ ನೀಡಿದ್ದು! ನನಗೀಗ ನನ್ನ ಭವಿಷ್ಯವೆಂದರೆ ಅಂಧಕಾರ ಮಾತ್ರ ಎನ್ನಿಸಿದೆ. ಅವರು ಸಾಯಿಸಿದ್ದು ನನ್ನ ತಂದೆಯನ್ನು ಮಾತ್ರವಲ್ಲ, ನನ್ನ ಕನಸನ್ನೂ. ಅವರು ಯಾಕೆ ನನ್ನ ತಂದೆಯನ್ನು ಕೊಂದರು ಎಂಬುದಕ್ಕೆ ನನಗಿನ್ನೂ ಉತ್ತರ ಸಿಕ್ಕಿಲ್ಲ.
ಆಕೆಯ ಮುಗ್ಧ ಪ್ರಶ್ನೆಯನ್ನು ಕೇಳಿದರೆ ಕರುಳು ಚುರುಕ್ಕೆನ್ನುತ್ತದೆ. ಈ ಪ್ರಶ್ನೆಗೆ ಯಾರು ಉತ್ತರಿಸಬೇಕು? ಕೇರಳದಲ್ಲಿ ಇಂಥ ಹತ್ಯೆಗಳೇನು ಹೊಸತಲ್ಲ. ವಿಸ್ಮಯಳ ಪ್ರಶ್ನೆಯೊಳಗೆ ಅವಿತಿರುವ ಮುಗ್ಧ ಮನಸ್ಸಿನ ದಿಗಿಲು, ನಿಷ್ಕಾರಣವಾಗಿ ತನ್ನ ನಗುವನ್ನು ಕಸಿದುಕೊಂಡವರ ಬಗೆಗಿನ ರೋಷ ಮತ್ತೊಬ್ಬರನ್ನು ನಿರ್ದಯವಾಗಿ ಹತ್ಯೆ ಮಾಡುವವರಿಗೆ ಅರ್ಥವಾಗಬೇಕಿದೆ.
ಇದು ಎಡ-ಬಲವೆಂಬ ಮತ್ತೊಂದು ರಾಜಕೀಯ ಕೆಸರೆರಚಾಟಕ್ಕೆ ವಿಷಯವಾಗದೆ, 12 ವರ್ಷದ ಪುಟ್ಟ ಬಾಲಕಿಯ ಭವಿಷ್ಯವನ್ನು, ಆಕೆಯಂತೆ ಭವಿಷ್ಯವೆಂದರೆ ಅಂಧಕಾರ ಎಂದುಕೊಂಡ ಮುಗ್ಧ ಮಕ್ಕಳ ಬದುಕನ್ನು ಬೆಳಗುವ ಉದ್ದೇಶ ಹೊಂದಬೇಕಿದೆ.













News Source - One India
loading...

Post a Comment

Powered by Blogger.