Veerakesari 08:41
ಇವತ್ತು ಬೆಳಗ್ಗೆ ದೇವನೂರು ಮಹಾದೇವ ಎಂಬ ನಮ್ಮ ನಡುವಿನ ಸಾಕ್ಷಿಪ್ರಜ್ಞೆ ವೇದಿಕೆಯಿಂದ ಮಾಡಿದ ಭಾಷಣವನ್ನು ಓದುತ್ತಿದ್ದೆ. ನಾಲ್ಕು ಸಾಲು ಓದುವಾಗಲೇ ಮೂರು ಸಲ ತೂಕಡಿಕೆ ಬಂತು. “ಇವತ್ತು ಸ್ವಾತಂತ್ರ್ಯ ಕುಸಿಯುತ್ತಿದೆ. ಬಡವರು ಬಲ್ಲಿದರು ನಡುವಿನ ಅಸಮಾನತೆ ಹೆಚ್ಚುತ್ತಿದೆ. ಸಂವಿಧಾನದ ಆಶಯಗಳು ಸ್ವಾತಂತ್ಯ, ಸಮಾನತೆ, ಸೋದರತೆ ಮತ್ತು ನ್ಯಾಯ ಇಲ್ಲವಾಗಿವೆ….” ಎಂದು ಬೋರಿ ಉಚ್ಚೆ ಹುಯ್ದಂತೆ ಮಹದೇವರ ಭೀಷಣ ಭಾಷಣ ಹರಿದಿತ್ತು. ಬಹುಶಃ ಈ ಮನುಷ್ಯ ಗಾಢ ನಿದ್ದೆಯಲ್ಲಿದ್ದಾಗ ಯಾರಾದರೂ ತಟ್ಟಿ ಎಬ್ಬಿಸಿದರೂ ದಡಬಡಾಯಿಸಿ ಎದ್ದುನಿಂತು “ಇವತ್ತು ಸ್ವಾತಂತ್ರ್ಯ ಕುಸಿಯುತ್ತಿದೆ..” ಎಂದು ಶುರು ಮಾಡಬಹುದು.
ಜಗತ್ತಿನ ಎಲ್ಲರೂ ತಂತಮ್ಮ ಚರಿತ್ರೆಯ ಗಾಯಗಳನ್ನು ಮಾಯಲು ಬಿಟ್ಟು ಮುಂದೋಡುತ್ತಿದ್ದರೆ ಈ ದೇಶದ ದಲಿತರು ಮಾತ್ರ ಇದ್ದಲ್ಲೇ ವೃತ್ತಾಕಾರ ಸುತ್ತುತ್ತಿದ್ದಾರೆ. ಒಂದಾನೊಂದು ಕಾಲದಲ್ಲಿ ಅಂಬೇಡ್ಕರ್ ಯಾವ ಸಮಸ್ಯೆಗಳ ವಿರುದ್ಧವಾಗಿ ಹೋರಾಡಿದರೋ ಅವೇ ಸಮಸ್ಯೆಗಳನ್ನು ನಮ್ಮ ನಡುವಿನ ದಲಿತ ನಾಯಕರು ಇಂದೂ ವೇದಿಕೆಯ ಮೇಲಿಂದ ಭಜಿಸುತ್ತಿದ್ದಾರೆ. ಅದರರ್ಥ ಎಪ್ಪತ್ತು ವರ್ಷ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ದಲಿತರಿಗಾಗಿ ನಯಾಪೈಸೆ ಕೆಲಸವನ್ನೂ ಮಾಡಲಿಲ್ಲ ಎಂದಲ್ಲವೆ? ಇಪ್ಪತ್ತೊಂದನೇ ಶತಮಾನದ ದಲಿತ ಇನ್ನೂ ಅಸಮಾನತೆ, ಶೋಷಣೆ, ಅನ್ಯಾಯ, ಅತ್ಯಾಚಾರ ಎಂದು ಕೂಗುತ್ತಿದ್ದಾನೆಂದರೆ ಅದಕ್ಕೆ ಕಾರಣರಾದವರು ಯಾರು?ಮೀಸಲಾತಿಯ ಸವಲತ್ತನ್ನು ಕೊಟ್ಟೂ ದಲಿತರನ್ನು ಮೇಲೆತ್ತಲು ಸಾಧ್ಯವಾಗಿಲ್ಲವೆಂದರೆ ಯಾರು ಅದಕ್ಕೆ ಹೊಣೆ? ಒಂದನೇ ತರಗತಿಯಿಂದ ಪೋಸ್ಟ್ ಡಾಕ್ಟರಲ್ ಪದವಿಗಳವರೆಗೆ ಅವರಿಗೆ ಶಿಕ್ಷಣದಲ್ಲಿ ಬಗೆಬಗೆಯ ಸಹಾಯ ಮಾಡಿದರೂ ದಲಿತೋದ್ಧಾರ ಸಾಧ್ಯವಾಗಿಲ್ಲ ಎಂದರೆ ಯಾರು ಜವಾಬ್ದಾರಿ ಹೊರಬೇಕು?
ಸೂಕ್ಷ್ಮವಾಗಿ ಗಮನಿಸಿ. ಸ್ವಾತಂತ್ರ್ಯ ಬಂದ ಮೇಲೆ ಈ ದೇಶದಲ್ಲಿ ಬ್ರಾಹ್ಮಣರು ತಮ್ಮೆಲ್ಲಾ ಸವಲತ್ತುಗಳನ್ನೂ ಕೈಬಿಟ್ಟು ಬದುಕುತ್ತಿದ್ದಾರೆ. ಅವರಿಗೆ ಮೀಸಲಾತಿ ಇಲ್ಲ. ಸರಕಾರದ ಯೋಜನೆಗಳ ಬೆಂಬಲವಿಲ್ಲ. ಸಬ್ಸಿಡಿ ದರದಲ್ಲಿ ಸಾಲವಿಲ್ಲ. ಉಳುವವನೇ ಹೊಲದೊಡೆಯ ಎಂಬ ಕಾಯಿದೆ ಬಂದಾಗ ದೇಶದ ಬಹುಸಂಖ್ಯಾತ ಬ್ರಾಹ್ಮಣರು ಇದ್ದ ತುಂಡಗಲ ಜಮೀನೂ ಕೈಬಿಟ್ಟುಹೋಗಿ ಬೀದಿಗೆ ಬಿದ್ದರು. ದೇಶದಲ್ಲಿ ಕೇವಲ ೨% ಇರುವ ಅವರು ರಾಜಕೀಯ ನಾಯಕರಿಗೂ ಕಾಣಿಸರು. ಹಾಗಿದ್ದರೂ ಬ್ರಾಹ್ಮಣರು ಇದುವರೆಗೆ ಒಂದೇ ಒಂದು ಸಲ ಸರಕಾರದ ಮುಂದೆ ಹಕ್ಕೊತ್ತಾಯ ಮಾಡಿಲ್ಲ. ತಮಗೆ ಸವಲತ್ತು ಬೇಕು ಎಂದು ಕೇಳಿಲ್ಲ. ಮೀಸಲಾತಿಗಾಗಿ ಒತ್ತಾಯಿಸಿಲ್ಲ. ದೇಶದಲ್ಲಿ ಯಾವ ಬಗೆಯಲ್ಲಿ ಜನಗಣತಿ ಮಾಡಿದರೂ ಅಲ್ಪಸಂಖ್ಯಾತರ ಪಟ್ಟಿಯಲ್ಲಿ ಬರಬೇಕಿದ್ದ ಬ್ರಾಹ್ಮಣರು ಆ ಪಟ್ಟವನ್ನು ಅನ್ಯಮತೀಯರಿಗೆ ಬಿಟ್ಟುಕೊಟ್ಟು ತಾವು ಕಷ್ಟಸಹಿಷ್ಣುಗಳಾಗುವ ದಾರಿಯನ್ನು ಆರಿಸಿಕೊಂಡಿದ್ದಾರೆ.
ಬಹುಶಃ ಇದೇ ಇಂದಿಗೂ ಬ್ರಾಹ್ಮಣರನ್ನು ಸಮಾಜದ ಅಲ್ಪಸಂಖ್ಯಾತರಾದರೂ ಬಹುಸಂಖ್ಯಾತರ ನಿದ್ದೆಗೆಡಿಸುವಷ್ಟು ಪ್ರಬಲ ಸಮುದಾಯವಾಗಿ ಕಾಯ್ದಿರಿಸಿದೆ ಅನ್ನಿಸುತ್ತದೆ. ತಮ್ಮ ಪ್ರಗತಿಗೆ ಏನೇನು ಅಡ್ಡಗಾಲಾಗುತ್ತದೋ ಅವೆಲ್ಲವನ್ನೂ ತ್ಯಜಿಸಿ ಬ್ರಾಹ್ಮಣರು ಮುಂದುವರಿದರು. ಉದಾಹರಣೆಗೆ, ಮನುಸ್ಮೃತಿಯನ್ನು ಬ್ರಾಹ್ಮಣರು ಕೈಬಿಟ್ಟು ಶತಮಾನಗಳೇ ಆದವು. ಆದರೆ ಅದನ್ನು ಇಂದಿಗೂ ದಲಿತ ನಾಯಕರು ಮಾತ್ರ ತಲೆ ಮೇಲೆ ಚಪ್ಪಡಿಯಂತೆ ಹೊತ್ತು ತಿರುಗುತ್ತಿದ್ದಾರೆ. ದಿನಕ್ಕೆ ನೂರು ಸಲ ಆ ಗ್ರಂಥವನ್ನು ನೆನೆಯದಿದ್ದರೆ ಅವರಿಗೆ ತಿಂದದ್ದು ಅರಗದು ಎನ್ನುವಂತಾಗಿದೆ. ಒಂದು ರೀತಿಯಲ್ಲಿ, ದಲಿತರು ತಮ್ಮ ಪ್ರಗತಿಗೆ ಏನೇನು ಕಂಟಕಗಳೋ ಅವೆಲ್ಲವನ್ನೂ ಕೈಗೆ ಕಾಲಿಗೆ ಸರಪಳಿಯಂತೆ ಬಿಗಿದು ಕೂತಿದ್ದಾರೆ ಎಂದು ಹೇಳಬೇಕಾಗಿದೆ. ತನ್ನ ಬದುಕಿನ ದಾರಿಯನ್ನು ತಾನೇ ರೂಪಿಸಿಕೊಳ್ಳಬೇಕೆಂದು ಹೊರಡುವ ದಲಿತನನ್ನೂ ಯಾವುದಾದರೂ ಸಮಿತಿಗೋ ಮಂಡಳಿಗೋ ಸೇರಿಸಿ, ಆತ ವರ್ಷಪೂರ್ತಿ ಬೀದಿ ಹೋರಾಟ, ಪ್ರತಿಭಟನೆಗಳಲ್ಲಿ ಬ್ಯುಸಿಯಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಆತ ಹುಟ್ಟಿರುವುದೇ ಬೀದಿಯಲ್ಲಿ ಬ್ಯಾನರ್ ಹಿಡಿದು ಘೋಷಣೆ ಕೂಗುವುದಕ್ಕೆ ಎಂದು ಆತನನ್ನು ನಂಬಿಸಲಾಗುತ್ತದೆ.
ಈಗ ದಲಿತರು, ಯಾರನ್ನು ಮೈಲಿಗಟ್ಟಲೆ ದೂರವಿಡಬೇಕೆಂದು ಅಂಬೇಡ್ಕರ್ ಕರೆ ಕೊಟ್ಟಿದ್ದರೋ ಅಂತಹ ಕಮ್ಯುನಿಸ್ಟರೊಂದಿಗೆ ಕೈ ಜೋಡಿಸುವ ಯೋಚನೆ ಮಾಡಿದ್ದಾರಂತೆ! ಕಮ್ಯುನಿಸಂ ಎಂದರೇನೇ ಪ್ರತಿಭಟನೆಗಳ ಚರಿತ್ರೆ. ಅವರು ಇದುವರೆಗೆ ಯಾವ ಸಮಸ್ಯೆಗಾದರೂ ಪರಿಹಾರವನ್ನು ಕಂಡುಕೊಂಡ ಉದಾಹರಣೆಯೇ ಇಲ್ಲ. ಅಂತಹ ನಿಂತ ನೀರನ್ನು ದಲಿತರು ತಮ್ಮ ಗಡಿಗೆಗಳಲ್ಲಿ ತುಂಬಿಸಿಕೊಂಡು ತಲೆ ಮೇಲೆ ಹೊರಲು ಸಿದ್ಧರಾಗಿದ್ದಾರೆಂದರೆ ತಮ್ಮ ಭವಿಷ್ಯತ್ತಿಗೆ ತಾವೇ ಕಲ್ಲು ಹಾಕಿಕೊಳ್ಳಲು ಸಿದ್ಧರಾಗಿದ್ದಾರೆ ಎಂದರ್ಥ. ಇಂದು ಕಮ್ಯುನಿಸ್ಟರಿಗೆ ತಮ್ಮ ಬುಡ ಗಟ್ಟಿಗೊಳಿಸಿಕೊಳ್ಳಲು ದಲಿತರು ಬೇಕಾಗಿದ್ದಾರೆಯೇ ವಿನಾ ದಲಿತರಿಗೆ ಕಮ್ಯುನಿಸ್ಟರ ಸಿದ್ಧಾಂತಗಳ ಅಗತ್ಯ ಇಲ್ಲ. ಇದನ್ನು ದಲಿತರು ಅರ್ಥ ಮಾಡಿಕೊಂಡರೆ ಉದ್ಧಾರವಾಗುತ್ತಾರೆ.
ನಾವು ಬೆಳೆಯಬೇಕಾದರೆ ಅಗತ್ಯವಾಗಿರುವುದು ಹೋರಾಟ, ಪ್ರತಿಭಟನೆ, ಘೋಷಣೆ, ಬೀದಿನಾಟಕ, ಸಮೂಹನೃತ್ಯ – ಇವೆಲ್ಲ ಅಲ್ಲ. ಇಂಥವನ್ನೆಲ್ಲ ಮಾಡಿ ನಾವು ದೇಶಕ್ಕೆ ಸ್ವಾತಂತ್ರ್ಯ ಪಡೆದು ಮುಕ್ಕಾಲು ಶತಮಾನವೇ ಆಯಿತು. ಸದ್ಯಕ್ಕೆ ನಮಗೆ ಬೇಕಿರುವುದು ನಮ್ಮ ಕಾಲ ಮೇಲೆ ನಾವು ನಿಂತು ಏನನ್ನಾದರೂ ಸಾಧಿಸಲು ಬೇಕಾದ ಧೈರ್ಯ, ಸ್ವಾಭಿಮಾನ, ಶಿಕ್ಷಣ, ಮಾರ್ಗದರ್ಶನ. ದಲಿತರು ಇದೊಂದು ಸಂಗತಿಯನ್ನಾದರೂ ಬ್ರಾಹ್ಮಣರಿಂದ ಕಲಿಯಬೇಕಿದೆ. ದ್ವೇಷವೊಂದೇ ನಮ್ಮ ಆಯುಧ, ಸಂಘರ್ಷವೊಂದೇ ನಮ್ಮ ದಾರಿ ಎಂದು ನಿಶ್ಚಯಪಡಿಸಿಕೊಂಡಿದ್ದರೆ, ಇನ್ನೊಂದು ಶತಮಾನ ಕಳೆದರೂ ಇದ್ದಲ್ಲೇ ವೃತ್ತಾಕಾರವಾಗಿ ಸುತ್ತುತ್ತ ಇರಬೇಕಾಗುತ್ತದೆ ಅಷ್ಟೆ.
– ರೋಹಿತ್ ಚಕ್ರತೀರ್ಥ (FB ಮುಖಪುಟದಿಂದ)

Post a Comment

Powered by Blogger.