ಒಕ್ಕಲಿಗರು ಮತ್ತು ಟಿಪ್ಪು : ಟಿಪ್ಪು ಬ್ರಿಟಿಷರ ಜೊತೆ ಹೋರಾಡುತ್ತ ವೀರಮರಣವನ್ನಪ್ಪಿದ ಎಂಬ ಮಾಹಿತಿಯನ್ನು ಕಾಂಗ್ರೆಸ್ ನಿರ್ಮಿತವಾದ ನಮ್ಮ ಶಾಲಾ ಇತಿಹಾಸ ಪಠ್ಯಗಳು ಕೊಡುತ್ತವೆ. ಆದರೆ, ಮೈಸೂರಿನ ಇತಿಹಾಸ ಹೇಳುವ ಪುಸ್ತಕಗಳು ಬೇರೆಯೇ ಕತೆ ಹೇಳುತ್ತವೆ. ಮೊತ್ತಮೊದಲಾಗಿ ಹೇಳುವುದಾದರೆ ಟಿಪ್ಪುವಾಗಲೀ ಅವನ ತಂದೆ ಹೈದರಾಲಿಯಾಗಲೀ ರಾಜವಂಶದ ಹಿನ್ನೆಲೆಯವರಲ್ಲ. 1749ರಲ್ಲಿ ಮೈಸೂರು ಸಂಸ್ಥಾನದ ಸೈನ್ಯದಲ್ಲಿ ಒಬ್ಬ ಸಾಮಾನ್ಯ ಸೈನಿಕನಾಗಿ ಸೇರುವ ಹೈದರ್ ಅಲಿ, ಮುಂದೆ ಸೇನಾಧಿಪತಿಯ ಮಟ್ಟಕ್ಕೆ ಬೆಳೆದು ಕೊನೆಗೆ 1761ರಲ್ಲಿ ಮೈಸೂರು ಅರಸ ಎರಡನೇ ಕೃಷ್ಣರಾಜ ಒಡೆಯರನ್ನು ಗೃಹಬಂಧನದಲ್ಲಿಡುತ್ತಾನೆ. ಸರ್ವಾಧಿಕಾರಿಯಾಗಿ ಆಳುತ್ತಿದ್ದರೂ ಹೊರಗಿನ ಜಗತ್ತಿಗೆ ತಾನು “ಮಹಾರಾಜರ ಪ್ರತಿನಿಧಿ” ಎಂದೇ ಬಿಂಬಿಸಿಕೊಳ್ಳುತ್ತಾನೆ. ಈ ರೀತಿಯಲ್ಲಿ ಅವನು ಅರಸರನ್ನು ಒತ್ತೆಯಿಟ್ಟುಕೊಂಡು 21 ವರ್ಷ ರಾಜ್ಯಭಾರ ಮಾಡಿದ. ಹೈದರ್ ಅಲಿ, ಯುದ್ಧವೊಂದರಲ್ಲಿ ಸಾವಿಗೀಡಾದಾಗ 1782ರಲ್ಲಿ ಅವನ ಮಗ ಟಿಪ್ಪು ಪಟ್ಟಕ್ಕೆ ಬಂದ. ಮೈಸೂರು ಅರಸರಿಂದ ದೂರವಾಗಿ ಶ್ರೀರಂಗಪಟ್ಟಣವನ್ನು ತನ್ನ ರಾಜಧಾನಿಯಾಗಿ ಆಯ್ದುಕೊಂಡ.
ಹೈದರಾಲಿಯ ನಿಧನದ ನಂತರ ಮೈಸೂರನ್ನು ತನ್ನ ಕೈಯಲ್ಲಿ ಉಳಿಸಿಕೊಳ್ಳಲು ರಾಜಮಾತೆ ಲಕ್ಷ್ಮೀ ಅಮ್ಮಣ್ಣಿಯವರು ಪ್ರಯತ್ನಿಸಿದಾಗ ಟಿಪ್ಪು ಪ್ರತಿರೋಧ ಒಡ್ಡಿದ. ಅವರಿಗೆ ಸಹಾಯ ಮಾಡುತ್ತಿದ್ದ ಎಲ್ಲರನ್ನೂ ನಿರ್ದಯವಾಗಿ ಪರಿಹರಿಸಿ ರಾಜಮಾತೆಯನ್ನು ಒಂಟಿಯಾಗಿಸಿದ. ಹೇಗಾದರೂ ಮಾಡಿ ತನ್ನ ಸಂಸ್ಥಾನವನ್ನು ಉಳಿಸಿಕೊಳ್ಳಲೇಬೇಕೆಂಬ ಹಠಕ್ಕೆ ಬಿದ್ದ ರಾಜಮಾತೆ, ಅದಕ್ಕಾಗಿ ತಿರುಮಲೈ ಅಯ್ಯಂಗಾರರ ಮೂಲಕ ಬ್ರಿಟಿಷರ ಸಹಾಯ ಕೋರಿದರು. ಆಗಿನ ವೈಸರಾಯ್ ಆಗಿದ್ದ ಲಾರ್ಡ್ ವೆಲ್ಲೆಸ್ಲಿ, ಮೈಸೂರಿನಲ್ಲಿ ಟಿಪ್ಪುವನ್ನು ಸೋಲಿಸಲು ಜನರಲ್ ಹ್ಯಾರಿಸ್ ಎಂಬಾತನಿಗೆ ನಾಯಕತ್ವ ಕೊಟ್ಟ.
ಅದೇ ಸಮಯದಲ್ಲಿ ಮಳವಳ್ಳಿಯಲ್ಲಿದ್ದ ದೊಡ್ಡ ನಂಜೇಗೌಡ ಮತ್ತು ಉರಿಗೌಡ ಎಂಬ ಇಬ್ಬರು ಒಡೆಯರ್ ನಿಷ್ಠ ಸೇನಾನಿಗಳೂ ಬ್ರಿಟಿಷರ ಜೊತೆ ಸೇರಿ ಟಿಪ್ಪುವನ್ನು ಮಣಿಸಲು ಶಪಥ ತೊಟ್ಟರು. 1799ರ ಮಾರ್ಚ್ 27ರಂದು ಇನ್ನೇನು ಕೈಗೆ ಸಿಕ್ಕೇಬಿಟ್ಟನೆಂಬಂತೆ ಸನಿಹ ಬಂದಿದ್ದ ಟಿಪ್ಪು, ಇವರೆಲ್ಲರ ಕೈಯಿಂದ ತಪ್ಪಿಸಿಕೊಂಡು ಶ್ರೀರಂಗಪಟ್ಟಣದ ಕೋಟೆ ಸೇರಿಕೊಂಡ. ಅದೇ ವರ್ಷದ ಮೇ 4ರಂದು ಬ್ರಿಟಿಷರು ಕೋಟೆಯನ್ನು ಮುತ್ತಿಗೆ ಹಾಕಿ, ಒಳಬರುವುದು ಖಚಿತವಾದಾಗ ಟಿಪ್ಪು ಜನಸಾಮಾನ್ಯರಂತೆ ವೇಷ ಧರಿಸಿ ಪಲಾಯನ ಮಾಡಲು ಯತ್ನಿಸಿದ. ಆದರೆ, ಕೋಟೆಯ ಒಳಗಿದ್ದವರನ್ನೆಲ್ಲ ಬ್ರಿಟಿಷರು ಸಾಯಿಸಿದ್ದರಿಂದ, ಅವರ ನಡುವಲ್ಲಿದ್ದ ಟಿಪ್ಪು ಕೂಡ ಸತ್ತುಬಿದ್ದ. ಆತ ಸತ್ತುಬಿದ್ದಿದ್ದಾನೆನ್ನುವುದು ಮೊದಲು ಬ್ರಿಟಿಷರಿಗೆ ತಿಳಿಯಲಿಲ್ಲ. ಕೊನೆಗೆ, ಶವಗಳ ಪರಿಶೀಲನೆ ನಡೆಸಿ, ಹೆಣಗಳ ಮಧ್ಯದಲ್ಲಿ ಟಿಪ್ಪುವನ್ನು ಗುರುತಿಸಲಾಯಿತು. ಟಿಪ್ಪುವಿನ ಶವ ಸಿಕ್ಕ ಜಾಗವನ್ನು ಇಂದಿಗೂ ಶ್ರೀರಂಗಪಟ್ಟಣದಲ್ಲಿ ನೋಡಬಹುದು.
The body of Tipu Sultan was FOUND here ಎಂದು ಬರೆದ ಒಂದು ಕಲ್ಲನ್ನು ಅಲ್ಲಿ ನೆಟ್ಟಿದ್ದಾರೆ. ಟಿಪ್ಪುವಿನ ಮರಣಾನಂತರ ಮೈಸೂರು ಮತ್ತು ಶ್ರೀರಂಗಪಟ್ಟಣ ಮತ್ತೆ ಒಡೆಯರ ಆಡಳಿತಕ್ಕೆ ಒಳಪಟ್ಟಿತು.

#ತಿಪ್ಪೇಸುಲ್ತಾನ
Post a Comment