Veerakesari 00:14
loading...
​ಕಂಬಳದ ಅನಭಿಷಿಕ್ತ ದೊರೆ ನಾಗರಾಜನನ್ನು ಕಂಬಳ ಪ್ರೇಮಿಗಳು ಎಂದೂ ಮರೆಯಲು ಸಾಧ್ಯವಿಲ್ಲ.ತನ್ನನ್ನು ಸಾಕಿದ ಒಡೆಯನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ತಂದು ಕೊಟ್ಟ ತಾನು ಬದುಕಿದ್ದಷ್ಟು ವರ್ಷ ಕಂಬಳದ ದೊರೆಯಾಗಿಯೇ ಮರೆದ ಕೋಣ ನಾಗರಾಜ.
1985 ರಲ್ಲಿ ಹುಟ್ಟಿ 1988 ರಲ್ಲಿ ನಾಗರ ಪಂಚಮಿ ದಿನ ಬಪ್ಪನಾಡು ದುರ್ಗೆ ಆಶೀರ್ವಾದ ಪಡೆದು "ನಾಗರಾಜ" ಎಂಬ ಹೆಸರಿನೊಂದಿಗೆ ಪಯ್ಯೊಟ್ಟು ಮನೆ ಸೇರಿ ತನ್ನ ನಾಲ್ಕನೇ ವಯಸ್ಸಿನಿಂದಲೇ ಕಂಬಳದ ಗದ್ದೆಯಲ್ಲಿ ಓಡಲು ಶುರುಮಾಡಿದ ನಾಗರಾಜ ತಾನು ಆಡಿದ 500 ಕ್ಕೂ ಹೆಚ್ಚು ಕಂಬಳದಲ್ಲಿ 115 ಬಾರಿ ಬಂಗಾರದ ಪದಕ ತನ್ನದಾಗಿಸಿಕೊಂಡಿದ್ದ.
ನಾಗರಾಜನ ವೇಗವನ್ನು ಮೀರಿಸುವ ಮತ್ತೊಂದು ಕೋಣ ಇರಲಿಕ್ಕಿಲ್ಲ . ನಾಗರಾಜ ಕೆಸರು ಗದ್ದೆಯಲ್ಲಿ 100ಮೀಟರ್ ದೂರವನ್ನು ಕ್ರಮಿಸಲು ತೆಗೆದುಕೊಳ್ಳುತ್ತಿದ್ದದ್ದು 12ಸೆಂಕೆಂಡ್ ಅಂದರೆ ಆತನ ವೇಗ, ತಾಕತ್ತು ಎಂತದ್ದು ಎಂಬುದು ತಿಳಿಯಬಹುದು.
ನಾಗರಾಜನನ್ನು ಸಾಕಿದ್ದು ಪೊಯ್ಯೊಟ್ಟು ಸದಾಶಿವ ಸಾಲ್ಯಾನ್, ಮೂಲ್ಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ, ಮೂಲ್ಕಿ ರಿಕ್ಷಾ ಯೂನಿಯನಿನ ಗೌರವಾಧ್ಯಕ್ಷ ಮತ್ತು ಜಿಲ್ಲಾ ಕಂಬಳ ಕಮಿಟಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಾಲ್ಯಾನ್ ಅವರಿಗೆ ನಾಗರಾಜನಿಂದಾಗಿ 2013 ರಲ್ಲಿ ಕ್ರೀಡಾ ವಿಭಾಗದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದರು.
ಜಾನಪದ ಕ್ರೀಡೆ ಕಂಬಳ ಕೋಣಗಳನ್ನು ವಿಶೇಷ ಮುತುವರ್ಜಿಯಲ್ಲಿ ಸಾಕಿ ಸಲಹಿದ್ದ ಸಾಲಿಯಾನ್ ಅವರ ಕೋಣಗಳು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಂಬಳಗಳಲ್ಲಿ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದವು. ಜನಾನುರಾಗಿಯೂ ಮತ್ತು ಕೃಷಿ ಕ್ಷೇತ್ರದಲ್ಲೂ ತಮ್ಮದೇ ಆದ ಸಾಧನೆ ಮಾಡಿದ್ದ ಸಾಲ್ಯಾನ್, ಜಿಲ್ಲೆಯಲ್ಲಿ ಕಂಬಳ ಕ್ರೀಡೆಯ ಸಂಘಟನೆಯಲ್ಲಿ ವಿಶೇಷ ಪಾತ್ರ ವಹಿಸಿದ್ದರು.
ಇವರು ಸಾಕಿದ್ದ ಕಂಬಳದ ಕೊಣಗಳಲ್ಲಿ 'ನಾಗರಾಜ' ಕಂಬಳದಲ್ಲಿ ರಾಜನಾಗಿ ಮೆರೆದಿತ್ತು. ಇದೇ ಕಾರಣಕ್ಕಾಗಿ ನಾಗರಾಜನ ಚಿತ್ರವನ್ನು ಭಾರತ ಸರ್ಕಾರದ ಅಂಚೆ ಇಲಾಖೆ 5 ಮತ್ತು 10 ರೂಪಾಯಿನ ಸ್ಟಾಂಪನಲ್ಲಿ ಬಳಸಿಕೊಂಡಿತ್ತು. ಅಷ್ಟೇ ಅಲ್ಲದೇ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಕಂಬಳ ಚಿತ್ರಣದ ಜಾಹೀರಾತಿನಲ್ಲಿ ಸಾಲ್ಯಾನ್ ಅವರ ನಾಗರಾಜ ಕೋಣದ ಫೋಟೋವನ್ನೇ ಬಳಸಿಕೊಳ್ಳುತ್ತಿದೆ.
ನಾಗರಾಜ ಬದುಕಿದ 24 ವರ್ಷಗಳಲ್ಲಿ 20ವರ್ಷದಲ್ಲಿ 500ಕ್ಕೂ ಹೆಚ್ಚು ಕಂಬಳದ ಸ್ಪರ್ಧೆಗಳಲ್ಲಿ ಭಾಗವಹಿಸಿ 115ಕ್ಕೂ ಹೆಚ್ಚು ಪದಕಗಳನ್ನು ಪಡೆದಿತ್ತು. ನಾಗರಾಜ ಮತ್ತು  ಆತನನ್ನು ಮಗನಂತೆ ಸಾಕಿದ ಪೊಯ್ಯೊಟ್ಟು ಸದಾಶಿವ ಸಾಲ್ಯಾನ್ ಇಂದು ನಮ್ಮ ಮಧ್ಯೆ ಇಲ್ಲದಿದ್ದರೂ ಅವರ ನೆನಪು ಮಾತ್ರ ಕಂಬಳ ಪ್ರೇಮಿಗಳಲ್ಲಿ ಅಮರವಾಗಿದೆ.
#veerakesari
loading...

Post a Comment

Powered by Blogger.