loading...
ಶಬರಿಮಲೆಯಲ್ಲಿ ಅಯ್ತಪ್ಪ ದರ್ಶನ ಮಾಡಿ ವಾಪಾಸಾಗುತ್ತಿದ್ದ ಅಯ್ಯಪ್ಪ ಭಕ್ತರ ಕಾರಿಗೆ ನಿನ್ನೆ ರಾತ್ರಿ ಏಕಾಏಕಿ ಬೆಂಕಿ ಹತ್ತಿಕೊಂಡಿದ್ದು, ಇದೇ ವೇಳೆ ಅದೇ ದಾರಿಯಲ್ಲಿ ತೆರಳುತ್ತಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರು ಅಯ್ಯಪ್ಪ ಭಕ್ತರ ರಕ್ಷಣೆಗೆ ಮುಂದಾಗಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಧಾರವಾಡದ ಕುಂದಗೋಳು ಮೂಲದ ಐವರು ಅಯ್ಯಪ್ಪ ಭಕ್ತರು ಶಬರಿಮಲೆಯಲ್ಲಿ ಅಯ್ಯಪ್ಪ ದರ್ಶನ ಮಾಡಿ ಹಿಂದಿರುಗುತ್ತಿದ್ದರು. ಕಾರು ಮಂಗಳೂರಿನ ಪಂಪ್‍ವೆಲ್-ನಂತೂರ್ ಸರ್ಕಲ್ ಪ್ರವೇಶಿಸುತ್ತಿದ್ದಂತೆ ಏಕಾಏಕಿ ಬೆಂಕಿ ಹತ್ತಿಕೊಂಡಿದೆ. ಇದೇ ವೇಳೆ ಮುಂಬೈನಿಂದ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿ ಯಾವುದೋ ಕಾರ್ಯಕ್ರಮದ ಪ್ರಯುಕ್ತ ಅದೇ ಮಾರ್ಗದ ಮೂಲಕ ತೆರಳುತ್ತಿದ್ದ ಸಚಿವ ಖಾದರ್ ಅವರು ಕಾರಿಗೆ ಬೆಂಕಿ ಹತ್ತಿಕೊಂಡಿದ್ದನ್ನು ಗಮನಿಸಿ ಅಯ್ಯಪ್ಪ ಭಕ್ತರನ್ನು ರಕ್ಷಿಸಿದ್ದಾರೆ. ತಮ್ಮ ಕಾರಿನಲ್ಲಿದ್ದ ನೀರು ಹಾಗೂ ಅಲ್ಲೇ ಇದ್ದ ಮಣ್ಣನ್ನು ಎಸೆದು ಕಾರಿಗೆ ಹತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಸಚಿವರಿಗೆ ಅವರ ಜೊತೆ ಪ್ರಯಾಣಿಸುತ್ತಿದ್ದ ಇತರರೂ ಸಾಥ್ ನೀಡಿದ್ದಾರೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ ಆದರೆ ಅವರು ಬರುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಹೋಗಿತ್ತು.
ಸಚಿವರು ಮತ್ತು ಅವರ ಕಾರಿನಲ್ಲಿದ್ದವರು ಅಯ್ಯಪ್ಪ ಭಕ್ತರ ವಸ್ತುಗಳನ್ನು ಹೊರಗೆಳೆದು ಹಾಕಿದ್ದರು. ಇಷ್ಟು ಮಾತ್ರವಲ್ಲದೆ ಭಕ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಿ ಪ್ರಯಾಣ ಮುಂದುವರಿಸಲು ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಟಿಕೆಟ್ ದೊರಕಿಸಿಕೊಟ್ಟು ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
loading...
Post a Comment